ಕಸಾಪಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರ | ʼಮಹೇಶ್ ಜೋಶಿಯಿಂದ ಜಿಲ್ಲಾಧ್ಯಕ್ಷರ ಮನವೊಲಿಸುವ ಪ್ರಯತ್ನʼ
ಕಸಾಪ ಅಧ್ಯಕ್ಷ ಮಹೇಶ್ ಜೋಶಿ
ಬೆಂಗಳೂರು : ʼಕನ್ನಡ ಸಾಹಿತ್ಯ ಪರಿಷತ್‌ಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿದರೆ, ನನ್ನ ಅಧಿಕಾರದ ಜತೆಗೆ ನೀವೆಲ್ಲರೂ (ಜಿಲ್ಲಾಧ್ಯಕ್ಷರ) ಅಧಿಕಾರವನ್ನು ಕಳೆದುಕೊಳ್ಳಬೇಕಾಗುತ್ತದೆʼ ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಜಿಲ್ಲಾಧ್ಯಕ್ಷರ ಮನವೊಲಿಸುವ ಪ್ರಯತ್ನ ಮಾಡಿರುವುದಾಗಿ ತಿಳಿದು ಬಂದಿದೆ.
ತೀವ್ರ ವಿವಾದಗಳಿಗೆ ಕಾರಣವಾದ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸಮಿತಿ ಸಭೆಯನ್ನು ಇದೇ ಮೊದಲ ಬಾರಿಗೆ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಕಸಾಪ ಅಧ್ಯಕ್ಷ ಡಾ.ಮಹೇಶ್ ಅಧ್ಯಕ್ಷತೆಯಲ್ಲಿ ನಗರದ ಚಾಮರಾಜಪೇಟೆಯಲ್ಲಿರುವ ಕಸಾಪ ಪಂಪ ಸಭಾಂಗಣದಲ್ಲಿ ಇತ್ತೀಚಿಗೆ ಅಗಲಿದ ಸಾಹಿತಿ ಹಾಗೂ ಗಣ್ಯರಿಗೆ ಮೌನಾಚರಣೆ ಮಾಡುವ ಮೂಲಕ ಸಭೆಯನ್ನು ಆರಂಭಿಸಲಾಯಿತು.
ಸಭೆಯಲ್ಲಿ ಮಾ.21 ಹಾಗೂ ಎ.21ರಂದು ನಡೆದ ಕಾರ್ಯಕಾರಿ ಸಮಿತಿ ಸಭೆ ಹಾಗೂ 2023-24ನೇ ಸಾಲಿನ ವಾರ್ಷಿಕ ವರದಿ, ಸ್ಥಳೀಯ ಲೆಕ್ಕಪರಿಶೋಧಕರ ಪರಿಶೀಲನಾ ವರದಿಯನ್ನು ಅಂಗೀಕರಿಸಿರುವುದು. ಪ್ರಸ್ತುತ ವಿದ್ಯಮಾನದಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸಿರುವುದಾಗಿ ತಿಳಿದು ಬಂದಿದೆ.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ.ಪದ್ಮನಿ ನಾಗರಾಜು, ನೇ.ಭ ರಾಮಲಿಂಗಶೆಟ್ಟಿ, ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು.
ಆಡಳಿತಾಧಿಕಾರಿ ನೇಮಕದ ಚರ್ಚೆ :
ಕಸಾಪಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿದರೆ, ಕಸಾಪಕ್ಕೆ ಕೆಟ್ಟ ಹೆಸರು ಬರುತ್ತದೆ. ಎಲ್ಲ ಆರೋಪಗಳಿಂದ ಮುಕ್ತನಾಗಲು ನಾನು ತಯಾರಾಗಿದ್ದೇನೆ. ನನ್ನ ಅಧಿಕಾರ ಹೋಗುವುದರ ಜತೆಗೆ ನಿಮ್ಮ ಅಧಿಕಾರವೂ ಹೋಗುತ್ತದೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರು ಜಿಲ್ಲಾಧ್ಯಕ್ಷರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅಧ್ಯಕ್ಷರ ಭಾಷಣಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿರುವುದಾಗಿ ತಿಳಿದು ಬಂದಿದೆ.
ಮೇ 17ರಂದು ಮಂಡ್ಯದಲ್ಲಿ ಜಾಗೃತಿ ಸಮಾವೇಶ :
ಪ್ರಜಾಪ್ರಭುತ್ವ ವಿರೋಧಿ ನೆಲೆಯಲ್ಲಿ ವರ್ತಿಸುತ್ತಿರುವ ಮಹೇಶ್ ಜೋಶಿ ನಡೆ ಹಾಗೂ ಬೈಲಾ ತಿದ್ದುಪಡಿಯನ್ನು ರದ್ದುಗೊಳಿಸುವುದು ಹಾಗೂ ಪ್ರಸ್ತಾವಿತ ಬೈಲಾವನ್ನು ತಡೆಹಿಡಿಯುವಂತೆ, ಕನ್ನಡ ನಾಡು ನುಡಿ ಜಾಗೃತಿ ಸಮಿತಿ ವತಿಯಿಂದ ಮೇ 17ರಂದು ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಾಗೃತಿ ಸಮಾವೇಶ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಸಮಾವೇಶದಲ್ಲಿ ಕಸಾಪ ಅಧ್ಯಕ್ಷರನ್ನು ಅಮಾನತುಗೊಳಿಸಿ, ಆಡಳಿತಾಧಿಕಾರಿಯನ್ನು ನೇಮಿಸಬೇಕು ಸೇರಿದಂತೆ ಇತರ ಬೇಡಿಕೆಯ ಕುರಿತು ಒತ್ತಾಯಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ