×
Ad

ರಾಮನಗರ ಬಾಲಕಿಯ ಕೊಲೆ ಪ್ರಕರಣ : ಸಮಗ್ರ ತನಿಖೆಗೆ ಆಗ್ರಹ

Update: 2025-05-15 23:55 IST

ಬೆಂಗಳೂರು : ರಾಮನಗರ ಜಿಲ್ಲೆಯ ಬಿಡದಿ ಬಳಿಯ ಭದ್ರಾಪುರದಲ್ಲಿ ಬಾಲಕಿಯ ಕೊಲೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಸಿಐಟಿಯು, ಪ್ರಾಂತ ರೈತಸಂಘ ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಗಳು ಆಗ್ರಹಿಸಿವೆ.

ಗುರುವಾರ ಜನವಾದಿ ಮಹಿಳಾ ಸಂಘಟನೆಯ ದೇವಿ, ಸುಶೀಲಾ, ರಶ್ಮಿ, ಎಸ್‌ಎಫ್‌ಐನ ಆರ್ಪಿತಾ, ಸಿಐಟಿಯುನ ರಾಘವೇಂದ್ರ, ಚಂದ್ರು, ಕೆಪಿಆರ್‌ಎಸ್‌ನ ವೆಂಕಟಲಯ್ಯ, ಗಾಯತ್ರಿ ಸೇರಿದಂತೆ ಹಲವು ಸದಸ್ಯರುಗಳನ್ನೊಳಗೊಂಡ ನಿಯೋಗವು ಅಲೆಮಾರಿ ಜನಾಂಗ ಹಕ್ಕಿಪಿಕ್ಕಿ ಸಮುದಾಯದ ಬಾಲಕಿಯ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿತು.

ಬಾಲಕಿ ಕಾಣೆಯಾದ ದಿನದಂದೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದರೂ, ತಕ್ಷಣವೇ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮಕ್ಕೆ ಯಾಕೆ ಮುಂದಾಗಲಿಲ್ಲ? ಮೃತದೇಹ ಸಿಕ್ಕ ಸ್ಥಳವನ್ನು ತಕ್ಷಣವೇ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಿ, ಸಿಗಬಹುದಾದ ಸಾಕ್ಷಿಗಳನ್ನು ರಕ್ಷಣೆ ಮಾಡಲು ಕೈಗೊಂಡ ಕ್ರಮಗಳೇನು? ಸ್ಥಳೀಯವಾಗಿ ಆರೋಪಿಗಳ ಓಡಾಟ ಮತ್ತಿತರ ಮಾಹಿತಿ ಸಂಗ್ರಹಿಸಿ ಅಪರಾಧ ಪತ್ತೆ ಮಾಡಲು ಕೈಗೊಂಡ ಕ್ರಮಗಳೇನು? ರಾಜ್ಯದ ಗೃಹ ಮಂತ್ರಿ ಹೀಗೆ ಪ್ರತಿನಿತ್ಯ ನಡೆಯುತ್ತಿರುವ ದಾರುಣ ಘಟನೆಗಳ ಜವಾಬ್ದಾರಿ ಹೊರಲು ಸಿದ್ಧರಿರುವರೆ? ಎಂದು ನಿಯೋಗವು ಪ್ರಶ್ನಿಸಿದೆ.

ಕಾಂಗ್ರೆಸ್ ಸರಕಾರ ನೊಂದವರಿಗೆ ಕೊಡಮಾಡುವ ಪರಿಹಾರ ಮೊತ್ತವನ್ನು ತಕ್ಷಣವೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಮಹಿಳೆಯರ, ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ನೊಂದ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದ ನಿಯೋಗದವರ ಮೇಲೆ ದೌರ್ಜನ್ಯ ಮಾಡಿದ ಪೊಲೀಸರ ಮೇಲೆ ಕ್ರಮ ವಹಿಸಬೇಕು ಎಂದು ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.

ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ ಬುಡಕಟ್ಟು ಮಹಾಸಭಾ

ಗುರುವಾರ ಅಲೆಮಾರಿ ಬುಡಕಟ್ಟು ಮಹಾಸಭಾದ ಸಂಸ್ಥಾಪಕ ಹಾಗೂ ಗೌರವಾಧ್ಯಕ್ಷ ಡಾ.ದ್ವಾರಕಾನಾಥ್, ರಾಜ್ಯಾಧ್ಯಕ್ಷ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಹಾಗೂ ಹರೀಶ್ ಭಾದ್ರಪುರದ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಧೈರ್ಯ ತುಂಬಿದರು.

ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆರೋಪಿಗಳ ಮೇಲೆ ಮಹಿಳಾ ಆಯೋಗವು ಸೇರಿದಂತೆ ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು. ಮೃತ ಸಂತ್ರಸ್ತೆಯ ಕುಟುಂಬದ ಒಬ್ಬರಿಗೆ ಸರಕಾರಿ ಹುದ್ದೆಯನ್ನು ನೀಡಬೇಕು. ಕುಟುಂಬದ ತಾಯಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಸಂಘಟನೆಯು ಸರಕಾರವನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News