×
Ad

ರಂಗಭೂಮಿಯಲ್ಲಿ ಸಂಸ್ಕೃತಿ ನಾಶ ಮಾಡುವ ಬೆಳವಣಿಗೆಗಳು ನಡೆಯುತ್ತಿವೆ : ಜಿ.ಎನ್.ಮೋಹನ್

Update: 2025-05-17 22:51 IST

ಬೆಂಗಳೂರು : ವಸಾಹತುಶಾಹಿ ಹೇಗೆ ಇಡೀ ಸಂಸ್ಕೃತಿಯನ್ನು ನಾಶ ಮಾಡಿತು ಎಂಬುದನ್ನು ಎಡ್ವರ್ಡ್ ಗ್ವಾಲಿಯಾನ್ ತನ್ನ ಬರಹಗಳಲ್ಲಿ ವಿವರವಾಗಿ ಹೇಳುತ್ತಾನೆ. ಅದೇ ರೀತಿಯಲ್ಲಿಂದು ಸಂಸ್ಕೃತಿಯನ್ನು ನಾಶ ಮಾಡುವ ಪ್ರಯತ್ನಗಳು ಕನ್ನಡ ರಂಗಭೂಮಿಯ ಒಳಗಡೆಯೂ ಸದ್ದಿಲ್ಲದೇ ನಡೆಯುತ್ತಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಚಿಂತಕ ಜಿ.ಎನ್.ಮೋಹನ್ ಆತಂಕ ವ್ಯಕ್ತಪಡಿಸಿದ್ದಾರೆ.

ಶನಿವಾರ ಕಲಾಗ್ರಾಮದಲ್ಲಿ ನಾಟಕ ಅಕಾಡಮಿ ವತಿಯಿಂದ ಆಯೋಜಿಸಿದ್ದ ‘ತಿಂಗಳ ನಾಟಕ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಂಗಭೂಮಿಯಲ್ಲಿ ಜನರನ್ನು ಪ್ರತಿನಿಧಿಸುವ, ಜನರ ನಿಟ್ಟುಸಿರನ್ನು ಹೇಳುವ, ಸರ್ವಾಧಿಕಾರವನ್ನು ಪ್ರತಿಭಟಿಸುವ, ಪ್ರತಿಯೊಂದನ್ನು ಪ್ರಶ್ನಿಸುವಂತಹ ಸಂಸ್ಕೃತಿಯನ್ನು ಸದ್ದಿಲ್ಲದೇ ಹೊಸಕಿ ಹಾಕುತ್ತಿರುವುದು ಪ್ರಸ್ತುತ ಕನ್ನಡ ರಂಗಭೂಮಿಯಲ್ಲಿ ನಡೆಯುತ್ತಿದೆ ಎಂದು ವಿವರಿಸಿದರು.

ಇಂದಿನ ವಸಾಹತುಶಾಹಿಗೆ ಹಿಡಿದ ಕನ್ನಡಿ ಫೈಯರ್ ಆಫ್ ಕರ್ನಾಟಕ ನಾಟಕ. ಕ್ಯೂಬಾದ ಕ್ರಾಂತಿಯಿಂದ ಪ್ರೇರಣೆಗೊಂಡು ದೊಡ್ಡ ಬರಹಗಾರನಾಗಿ ಹೊರಹೊಮ್ಮಿದವರು ಎಡ್ವರ್ಡ್ ಗ್ಯಾಲಿಯಾನ್. ಯಾವಾಗಲೂ ನೆನಪಗಳು ನನ್ನ ಮನಸ್ಸಿನಲ್ಲಿ ಚಿರಸ್ಥಾಯಿವಾಗಿ ನಿಂತಿದೆ ಎಂದು ಹೇಳುತ್ತಿರುತ್ತಾರೆ. ವಸಾಹತುಶಾಹಿಗಳ ಕುರಿತು ಅವರು ಬಿಚ್ಚಿಟ್ಟಂತಹ ನೆನಪುಗಳೇ ‘ಬೆಂಕಿಯ ನೆನಪುಗಳು ಕೃತಿ’ ಅದನ್ನು ಆಧಾರಿಸಿದ ನಾಟಕವೇ ಇದಾಗಿದೆ ಎಂದು ಜಿ.ಎನ್.ಮೋಹನ್ ಮಾಹಿತಿ ನೀಡಿದರು.

ನಾಟಕ ಎನ್ನುವುದು ಜನರ ಬಳಿಗೆ ತೆಗೆದುಕೊಂಡು ಹೋಗಬೇಕೆನ್ನುವ ಪ್ರಯತ್ನದಿಂದ ರಂಗ ಚಳವಳಿಗಳನ್ನು ಹುಟ್ಟುಹಾಕಿದೆವು. ಸಮುದಾಯ, ಚಿತ್ರ ನಾಟಕಗಳಂತಹ ತಂಡಗಳು ಬಂತು. ಇವರೆಲ್ಲರೂ ಜನಸಾಮಾನ್ಯರತ್ತ ಮತ್ತು ಜನರ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಜನರ ಬಳಿಗೆ ತೆಗೆದುಕೊಂಡು ಹೋಗುತ್ತಿದ್ದ ಕಾಲವೊಂದಿತ್ತು. ಆದರೆ, ಇದೀಗ ಬಂಡವಾಳಶಾಹಿ ಸಂಸ್ಕೃತಿ ನಿರ್ಮಾಣವಾಗಿ, ಕಾರ್ಪೊರೇಟ್ ಕಂಪೆನಿಗಳು ಸಂಸ್ಕೃತಿಯ ಗುತ್ತಿಗೆಯನ್ನು ತೆಗೆದುಕೊಂಡ ರೀತಿಯಲ್ಲಿ ವರ್ತಿಸುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜನರ ಸಂಸ್ಕೃತಿಯನ್ನು ಕಿತ್ತು ಹಾಕಿ, ಮತ್ತೆ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಬಿಂಬಿಸುವುದಕ್ಕೆ ನಾಟಕಗಳನ್ನು ಬಳಸುತ್ತಿದ್ದಾರೆ. ಸಂಸ್ಕೃತಿ ಎನ್ನುವುದು ಕಾರ್ಪೊರೇಟ್ ಸಂಸ್ಕೃತಿಯಾದರೆ, ಅದು ಸಮಾಜವನ್ನು ಪ್ರತಿನಿಧಿಸುವುದಿಲ್ಲ. ಹೀಗಾಗಿ ಜನಸಮುದಾಯಗಳನ್ನು ಪ್ರತಿನಿಧಿಸುವ ನಾಟಕಗಳು ಹೆಚ್ಚೆಚ್ಚು ಬರಬೇಕು ಎಂದು ಮೋಹನ್ ಹೇಳಿದರು.

ಕಾರ್ಯಕ್ರಮದಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಸದಸ್ಯರಾದ ಲವಕುಮಾರ್, ರವಿ ಸಿರಿವರ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News