×
Ad

ಕಾಂಗ್ರೆಸ್‌ಗೆ ನಿಷ್ಠರಾಗಿ ಕಾರ್ಯನಿರ್ವಹಿಸುತ್ತಿರುವ ಸ್ಪೀಕರ್ ಖಾದರ್ : ಆರ್.ಅಶೋಕ್

Update: 2025-05-07 23:43 IST

ಬೆಂಗಳೂರು : ಸ್ಪೀಕರ್ ಯು.ಟಿ.ಖಾದರ್ ಅವರಿಗೆ ನಾನು ಎಂಟು ಬಾರಿ ಫೋನ್ ಕರೆ ಮಾಡಿದರೂ ಆಮೇಲೆ ಬಾ ಎನ್ನುತ್ತಾರೆ. ಹಬ್ಬ, ನಮಾಝ್ ಇದೆ ಎಂದು ಹೇಳುತ್ತಾರೆ. ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆಂದು ನನಗೆ ಅನ್ನಿಸುತ್ತಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿ ಅನ್ಯಾಯ ಮಾಡಿದೆ. ಇದು ಅಧಿವೇಶನಕ್ಕೆ ಮಾತ್ರ ಸೀಮಿತವಾಗಿರಬೇಕು. ಸ್ಪೀಕರ್ ಯು.ಟಿ.ಖಾದರ್ ಹೇಗೆ ಸದನ ನಡೆಸುತ್ತಿದ್ದಾರೆಂದು ಅವರಿಗೇ ಗೊತ್ತಿಲ್ಲ ಎಂದು ಟೀಕಿಸಿದರು.

ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ, ಫಾಝಿಲ್ ಕುಟುಂಬವೇ ಭಾಗಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಸ್ಪೀಕರ್ ಯು.ಟಿ.ಖಾದರ್ ಮಾಧ್ಯಮದೊಂದಿಗೆ ಮಾತನಾಡಿ ಕುಟುಂಬ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. ಒಂದು ಕೊಲೆಯ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸ್ಪೀಕರ್ ಅನ್ನು ನಾನು ನೋಡಿದ್ದು ಇದೇ ಮೊದಲು. ಈ ಕೊಲೆಗೂ ಯು.ಟಿ.ಖಾದರ್ ಅವರಿಗೂ ಏನು ಸಂಬಂಧ? ಇವರೇನು ಗೃಹ ಸಚಿವರೇ? ಇವರಿನ್ನೂ ಕಾಂಗ್ರೆಸ್ ಪಕ್ಷದೊಳಗೆ ಇದ್ದಾರೆ ಎಂದು ಟೀಕಿಸಿದರು.

ನಾಳೆ ರಾಜ್ಯಪಾಲರನ್ನು ಭೇಟಿ ಮಾಡಿ ಈ ಕುರಿತು ಸರಿಯಾದ ತನಿಖೆ ನಡೆಸಲು ಮನವಿ ಮಾಡಲಾಗುವುದು. ಪಾಕಿಸ್ತಾನಿ ಪ್ರಜೆಗಳನ್ನು ಸ್ವದೇಶಕ್ಕೆ ಕಳಿಸುವ ಕುರಿತು ಪೊಲೀಸರಿಗೆ ನಿರ್ದೇಶನ ನೀಡುವಂತೆಯೂ ಕೋರಲಾಗುವುದು ಎಂದು ಅಶೋಕ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News