ಮಹಾ ಬೋಧಿ ಅಧ್ಯಯನ ಕೇಂದ್ರದ ಗ್ರಂಥಾಲಯದ ಡಿಜಿಟಲೀಕರಣಕ್ಕೆ 1 ಕೋಟಿ ರೂ. ಅನುದಾನ : ಶಿವರಾಜ ತಂಗಡಗಿ
ಬೆಂಗಳೂರು : ಬೆಂಗಳೂರಿನಲ್ಲಿ ಬೌದ್ಧ ಅಧ್ಯಯನ ಅಕಾಡಮಿ ಸ್ಥಾಪನೆ ಮಾಡಲಾಗುವುದು ಹಾಗೂ ಮಹಾಬೋಧಿ ಅಧ್ಯಯನ ಕೇಂದ್ರದ ನೂರು ವರ್ಷಗಳ ಹಳೆಯ ಗ್ರಂಥಾಲಯವನ್ನು ಡಿಜಿಟಲೀಕರಣಗೊಳಿಸಲು 1 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಭಗವಾನ್ ಬುದ್ಧರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸರಕಾರ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿರುವ ಅವಧಿಯಲ್ಲಿ ಭಗವಾನ್ ಬುದ್ಧರ ಜಯಂತಿಯ ಘೋಷಣೆ ಮಾಡಿ ಆಚರಣೆ ಮಾಡುತ್ತಿರುವುದು ನನ್ನ ಪಾಲಿನ ಅತ್ಯಂತ ಪುಣ್ಯದ ಕೆಲಸ ಎಂದು ಸಂತಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುದ್ಧರ ಜಯಂತಿ ಆಚರಣೆಗೆ ಅನುಮತಿ ಕೊಟ್ಟಿದ್ದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ವರ್ಷದ ಬಜೆಟ್‍ನಲ್ಲಿ ನಮ್ಮ ಸರಕಾರ ಜೈನ, ಬೌದ್ಧ ಹಾಗೂ ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಮನುಷ್ಯ ಮನುಷ್ಯರ ನಡುವೆ ದ್ವೇಷ, ಅಸೂಯೆ ಬೆಳೆಯುತ್ತಿರುವ ಇಂದಿನ ಸಂದರ್ಭದಲ್ಲಿ ಭಗವಾನ್ ಬುದ್ಧರ ತತ್ವಾದರ್ಶಗಳು ನಮಗೆ ಮಾರ್ಗದರ್ಶನ ನೀಡುತ್ತಿವೆ. ರಾಜರು ರಾಜರಾಗಿರಲು ಮಾತ್ರ ಬಯಸುತ್ತಾರೆ. ರಾಜತ್ವದಿಂದ ಮನುಷ್ಯನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ಜೀವನ ನಡೆಸುವುದು ಅಸಾಮಾನ್ಯ ಸಂಗತಿ. ಭಗವಾನ್ ಬುದ್ಧರು ಅದನ್ನು ಮಾಡಿ ತೋರಿಸಿದರು. ಅವರ ಶಾಂತಿ ತತ್ವ ಇಂದು ಎಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ಕ್ರಿ.ಪೂ 6ನೇ ಶತಮಾನದಲ್ಲಿ ಪ್ರಾರಂಭವಾದ ಬೌದ್ಧ ಧರ್ಮ, ಸುಮಾರು 1ನೇ ಶತಮಾನದ ವರೆಗೂ ಪ್ರವರ್ಧಮಾನ ಸ್ಥಿತಿಯಲ್ಲಿತ್ತು. ಸುಮಾರು ಸಾವಿರ ವರ್ಷಗಳ ಕಾಲ ಭಾರತದಿಂದ ನಾಪತ್ತೆಯಾಗಿತ್ತು ಇದು ದೊಡ್ಡ ಆಶ್ಚರ್ಯ. ಆದರೂ ಸುಮಾರು 37 ದೇಶಗಳಲ್ಲಿ ಬೌದ್ಧ ಧರ್ಮ ಆ ದೇಶದ ಧರ್ಮವಾಗಿ ಪರಿಪಾಲನೆಯಲ್ಲಿತ್ತು. ಅಮೇರಿಕಾ ಮತ್ತು ವಿಯಾಟ್ನಾಂ ಸೇರಿ ಇತರ ದೇಶಗಳಲ್ಲಿ ಬೌದ್ಧ ಧರ್ಮ ಬೆಳೆಯುತ್ತಿದೆ ಎಂದು ತಿಳಿಸಿದರು.
ಬುದ್ಧರನ್ನು ಭಾರತದಿಂದ ಓಡಿಸಿದರೂ ಕೂಡ, ಬೌದ್ಧ ಧರ್ಮ ಸ್ವಯಂ ಪ್ರೇರಿತವಾಗಿ ಬೆಳೆಯುತ್ತಿದೆ. ಎಲ್ಲಿಯೂ ಬೌದ್ಧ ಧರ್ಮವನ್ನು ಪ್ರಚಾರ ಮಾಡುವುದಿಲ್ಲ. ಬೌದ್ಧ ಧರ್ಮ ನೈತಿಕ ಹಾಗೂ ವಿಜ್ಞಾನ ನೆಲೆಯ ಮೇಲೆ ನಿಂತಿದೆ ಎಂದು ಎಲ್ಲರೂ ತಾವಾಗಿಯೇ ಬಂದು ಬೌದ್ಧ ಧರ್ಮವನ್ನು ಸೇರಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭೋದಿದತ್ತ ಭಂತೇಜಿ, ಬುದ್ದದತ್ತ ಭಂತೇಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಉಪಸ್ಥಿತರಿದ್ದರು.