ಬೆಂಗಳೂರಿನಲ್ಲಿ ಸಮೀಕ್ಷೆ ಆರಂಭ: ಮೊದಲ ದಿನವೇ ಹಲವು ವಿಘ್ನ
ಬೆಂಗಳೂರು, ಅ.4: ನಗರದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ಸಮೀಕ್ಷೆಗೆ ಮೊದಲ ದಿನವೇ ಹಲವು ವಿಘ್ನ ಎದುರಾಗಿದೆ. ಮೊಬೈಲ್ ತಂತ್ರಾಂಶ ಡೌನ್‍ಲೋಡ್ ಆಗದಿರುವುದು ಸೇರಿ ಇತರೆ ಸಮಸ್ಯೆಗಳಾಗಿವೆ. ಕೆಲವೆಡೆ ಇಂಟರ್‍ನೆಟ್ ಸಿಗ್ನಲ್ ಸಿಗದೆ ಸಮೀಕ್ಷಾಕಾರರು ತೊಂದರೆಗೆ ಸಿಲುಕಿದರು.
ಸಮೀಕ್ಷೆದಾರರಿಗೆ ಗುರುತಿನ ಚೀಟಿ, ಕ್ಯಾಪ್, ಪ್ಯಾಡ್, ಕೈಪಿಡಿ, ಸ್ವಯಂ ಘೋಷಣಾ ಪತ್ರ ಎಲ್ಲವನ್ನೂ ನೀಡಲಾಗಿದೆ. ಆದರೂ ತಾಂತ್ರಿಕ ಸಮಸ್ಯೆಗಳು ಸಮೀಕ್ಷೆದಾರರಿಗೆ ಸಮೀಕ್ಷೆ ಸಮರ್ಪಕವಾಗಿ ನಡೆಸಲು ಅಡ್ಡಿಯಾದವು. ಇದಲ್ಲದೆ, ಸಮೀಕ್ಷೆಯಲ್ಲಿ ಹೆಚ್ಚು ಪ್ರಶ್ನೆಗಳಿದ್ದು, ನಗರದ ಜನರಿಗೆ ಇಷ್ಟೊಂದು ಪ್ರಶ್ನೆಗೆ ಉತ್ತರಿಸುವ ತಾಳ್ಮೆ ಇರುವುದಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿವೆ.
ಗಣತಿದಾರರನ್ನು ನಿಯೋಜನೆ ಮಾಡುವ ಮುನ್ನ ಪ್ರತಿಯೊಬ್ಬರಿಂದಲೂ ಅವರು ಕೆಲಸ ಮಾಡುವ ಮತ್ತು ವಾಸದ ಸ್ಥಳ ವಿಳಾಸ ಪಡೆದುಕೊಂಡಿದ್ದಾರೆ. ಅದಕ್ಕೆ ಹತ್ತಿರದ ಪ್ರದೇಶಕ್ಕೆ ನಿಯೋಜನೆ ಮಾಡುವ ಬದಲಿಗೆ, ದೂರದ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ. ಆರಂಭದಲ್ಲಿ 10 ವಾರ್ಡ್‍ಗಳನ್ನು ಆಯ್ಕೆ ಮಾಡಿಕೊಳ್ಳಲು ಸಮೀಕ್ಷಾದಾರರಿಗೆ ಸೂಚನೆ ನೀಡಲಾಗಿತ್ತು.
ಆಯ್ಕೆ ಮಾಡಿಕೊಂಡ ಪ್ರದೇಶಗಳನ್ನು ಬಿಟ್ಟು ಬೇರೆ ಪ್ರದೇಶಗಳಿಗೆ ಗಣತಿದಾರರನ್ನು ನಿಯೋಜನೆ ಮಾಡಲಾಗಿದೆ. ಮಹಿಳೆಯರಿಗಂತೂ ವಿಪರೀತ ತೊಂದರೆಯಾಗಿದೆ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಅಳಲು ತೊಡಿಕೊಂಡಿದ್ದಾರೆ. ವಿಶೇಷ ಚೇತರಿಗೆ, ವಿಶೇಷ ಚೇತನ ಮಕ್ಕಳನ್ನು ಹೊಂದಿರುವವರನ್ನು ಸಮೀಕ್ಷೆಗೆ ನಿಯೋಜನೆ ಮಾಡಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮೊದಲ ದಿನವಾದ ಶನಿವಾರದಂದು 22,141 ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ. ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 2,822, ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ 3,105, ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 5,987, ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ 3,145, ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 7,082 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಪ್ರಾಧಿಕಾರವು ಮಾಹಿತಿ ನೀಡಿದೆ.