×
Ad

‘ನೀತಿ ಆಯೋಗದ ಸಭೆಗೆ ಸಿಎಂ ಗೈರು’ ರಾಜ್ಯಕ್ಕೆ ಅನ್ಯಾಯ : ವಿಜಯೇಂದ್ರ

Update: 2025-05-27 18:45 IST

ವಿಜಯೇಂದ್ರ

ಬೆಂಗಳೂರು : ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರು ಹಾಜರಾಗುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇಂದಿಲ್ಲಿ ಟೀಕಿಸಿದ್ದಾರೆ.

ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುತೇಕ ಎಲ್ಲ ರಾಜ್ಯಗಳು ಮುಖ್ಯಮಂತ್ರಿಗಳೂ ಆ ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಸರಕಾರದ ಆಡಳಿತ ಇರುವ ಹಿಮಾಚಲ ಪ್ರದೇಶ, ತೆಲಂಗಾಣಗಳ ಸಿಎಂಗಳು ಭಾಗವಹಿಸಿ ತಮ್ಮ ಅಭಿಪ್ರಾಯ, ದೂರದೃಷ್ಟಿತ್ವವನ್ನು ತಿಳಿಸಿದ್ದಾರೆ. ಆದರೆ, ಸಿದ್ದರಾಮಯ್ಯನವರು ಸಭೆಯನ್ನು ಬಹಿಷ್ಕರಿಸಿದರೇ? ಹೋಗಲು ಸಾಧ್ಯ ಆಗಲಿಲ್ಲವೇ ಎಂಬುದು ನನಗೆ ತಿಳಿದಿಲ್ಲ ಎಂದರು. 

ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳೇ, ಕಾಂಗ್ರೆಸ್ಸಿನ ಮುಖ್ಯಮಂತ್ರಿಗಳೇ ಎಂಬುದನ್ನು ಜನತೆಗೆ ಸ್ಪಷ್ಟಪಡಿಸಬೇಕು. ಅಪಪ್ರಚಾರ ಮಾಡುತ್ತ, ಕೇಂದ್ರ ಸರಕಾರದ ಜೊತೆ ಸಂಘರ್ಷದ ಹಾದಿ ತುಳಿಯುತ್ತ ರಾಜ್ಯಕ್ಕೆ ಅನ್ಯಾಯ ಮಾಡಲು ಹೊರಟಿದ್ದು ಸರಿಯಲ್ಲ, ಇದು ಅಕ್ಷಮ್ಯ ಅಪರಾಧ ಎಂದು ವಿಜಯೇಂದ್ರ ದೂರಿದರು.

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಲು ನಿರ್ಧರಿಸಿದ್ದಾರೆ. ಯಾವ ಸಚಿವರಿಗೆ ಏನೆನ್ನಿಸುತ್ತದೋ ಅದನ್ನು ಸಂಪುಟ ಸಭೆಯಲ್ಲಿ ಇಟ್ಟಾಗ ನಿರ್ಧರಿಸುತ್ತೀರಾ ಮುಖ್ಯಮಂತ್ರಿಗಳೇ?. ನಾಳೆ ಬಿಜಾಪುರ ಉಸ್ತುವಾರಿ ಸಚಿವರಿಗೆ ಬೇರೆ ಇನ್ನೇನೋ ಹೆಸರಿಡಬೇಕು ಅನ್ನಿಸುತ್ತದೆ. ಶಿವಮೊಗ್ಗ ಜಿಲ್ಲೆಗೆ ಅಲ್ಲಿನ ಸಚಿವರು ಇನ್ನೇನೋ ಸಲಹೆ ಕೊಡುತ್ತಾರೆ. ಮಂತ್ರಿಗಳನ್ನು ಖುಷಿ ಪಡಿಸಲು ಹೆಸರು ಬದಲಿಸುವುದಾದರೆ ಅದಕ್ಕೇನು ಪಾವಿತ್ರ್ಯತೆ ಇದೆ ಎಂದು ಅವರು ಕೇಳಿದರು.

ರಾಜ್ಯ ಸರಕಾರಕ್ಕೆ ರಿಯಲ್ ಎಸ್ಟೇಟ್ ಒಂದೇ ಮಾನದಂಡವೆ?. ರಿಯಲ್ ಎಸ್ಟೇಟ್ ಒಂದೇ ಮಾನದಂಡ ಎಂದುಕೊಂಡರೆ ಆ ಭಾಗದ ರೈತರ ಪರಿಸ್ಥಿತಿ ಏನಾದೀತು. ಹಿಂದೆ ಮುಂದೆ ಆಲೋಚಿಸದೆ ಇಂತಹ ನಿರ್ಧಾರ ಮಾಡುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ವಿಪಕ್ಷಗಳ ಮೇಲೆ ಸವಾರಿ: ಕಾಂಗ್ರೆಸ್ ಸರಕಾರವು ವಿಪಕ್ಷಗಳ ಮೇಲೆ ಸವಾರಿ ಮಾಡುತ್ತಿದೆ. ನಾಯಕರ ಮೇಲೆ ಸವಾರಿ ನಡೆಸುತ್ತಿದ್ದಾರೆ. ವಿಪಕ್ಷಗಳ ಶಾಸಕರ ಮೇಲೆ ಕೇಸ್ ಹಾಕಿ ಬೆದರಿಕೆ ಹಾಕುವ ಕುತಂತ್ರ ಮಾಡುತ್ತಿದ್ದಾರೆ. ಕಲಬುರ್ಗಿಯಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಜಿಲ್ಲಾಡಳಿತದ ವಿಫಲತೆ, ಪೊಲೀಸ್ ಇಲಾಖೆ ಕೈಗೊಂಬೆ ಆಗಿದ್ದು, ಈ ವಿಷಯಗಳನ್ನು ಮುಂದಿಟ್ಟು ಪ್ರತಿಭಟನೆ ಮಾಡಿದ್ದೇವೆ. ಕೆಲ ವಿಷಯ ಮಾತನಾಡಿದ ರವಿಕುಮಾರ್ ಬಳಿಕ ಕ್ಷಮೆ ಕೇಳಿದ್ದಾರೆ.  ಆದರೆ, ಅವರ ವಿರುದ್ಧ ಎಫ್‍ಐಆರ್ ಹಾಕಿದ್ದಾರೆ. ಮಂಗಳೂರಿನಲ್ಲಿ ಶಾಸಕ ಭರತ್ ಶೆಟ್ಟಿ ವಿರುದ್ಧ ಎಫ್‍ಐಆರ್ ಮಾಡಿದ್ದಾರೆ. ಹಿಂದೆ ಹರೀಶ್ ಪೂಂಜಾರ ವಿರುದ್ಧ ಎಫ್‍ಐಆರ್ ಮಾಡಿದ್ದರು. ಸದನದಿಂದ 18 ಶಾಸಕರನ್ನು ಅಮಾನತು ಮಾಡಿ ಮೊನ್ನೆ ಅದನ್ನು ವಾಪಸ್ ಪಡೆದಿದ್ದಾರೆ. ಸರಕಾರದ ಒತ್ತಡಕ್ಕೆ ಮಣಿದು ಇದಾಗಿತ್ತು. ವಿಪಕ್ಷವನ್ನು ಹತ್ತಿಕ್ಕುವ ಕೆಲಸ ನಡೆದಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅವರು ಟೀಕಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News