×
Ad

ಐಎಎಸ್ ಅಧಿಕಾರಿಗಳ ಸಂಘ ಸಿಎಂ ವಿರುದ್ಧ ಏಕೆ ದೂರು ನೀಡಿಲ್ಲ? : ವಿಜಯೇಂದ್ರ

Update: 2025-07-04 22:32 IST

ಬೆಂಗಳೂರು : ಮುಖ್ಯಮಂತ್ರಿ ಐಎಎಸ್ ಅಧಿಕಾರಿಗಳ ವಿರುದ್ಧ ಅವಮಾನ ಆಗುವಂತೆ ನಡೆದುಕೊಂಡಾಗ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ಎಲ್ಲಿ ಹೋಗಿತ್ತು? ಆಗ ಅವರು ಯಾಕೆ ಮುಖ್ಯಮಂತ್ರಿ ವಿರುದ್ಧ ದೂರು ನೀಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಶುಕ್ರವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರ ಹೇಳಿಕೆ ಕುರಿತು ಮಾಧ್ಯಮಗಳನ್ನು ಗಮನಿಸಿದ್ದೇನೆ. ರವಿಕುಮಾರ್ ಈ ಸಂಬಂಧ ಸ್ಪಷ್ಟನೆಯನ್ನೂ ನೀಡಿದ್ದಾರೆ. ತದನಂತರ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್‍ನವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ದೂರು ನೀಡಿದ್ದಾಗಿ ಮಾಹಿತಿ ಬಂದಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ನಿನ್ನೆ ಸಭಾಪತಿ ಬಸವರಾಜ ಹೊರಟ್ಟಿಯವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಎಫ್‍ಐಆರ್ ದಾಖಲಾಗಿದೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಬೆಳಗಾವಿಯಲ್ಲಿ ಬಹಿರಂಗ ಸಭೆಯಲ್ಲಿ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಗೆ ಕಪಾಳಕ್ಕೆ ಹೊಡೆಯಲು ಹೋದರಲ್ಲವೇ? ಆಗ ಈ ಅಸೋಸಿಯೇಷನ್ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.

ಇದೇ ಮುಖ್ಯಮಂತ್ರಿ ಇನ್ನೊಂದು ಕಡೆ ಸರಕಾರಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯನ್ನು ‘ಏಯ್ ಎದ್ದೇಳು’ ಎಂದು ಅಪಮಾನ ಮಾಡಿದ್ದರು. ಆಗ ಐಎಎಸ್ ಅಸೋಸಿಯೇಷನ್ ಎಲ್ಲಿ ಹೋಗಿತ್ತು? ಇದು ಕೂಡ ಚರ್ಚೆ ಆಗಲಿ. ಜನರು ಕೂಡ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.

ಸಂಬಳ ನೀಡಲಾಗದ ಸ್ಥಿತಿ: ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಯಾರು ಮುಖ್ಯಮಂತ್ರಿ ಎಂಬುದು ನಮಗೆ ಮುಖ್ಯವಲ್ಲ. ಕಾಂಗ್ರೆಸ್ ಸರಕಾರಕ್ಕೆ ರಾಜ್ಯದ ಜನರು ಛೀಮಾರಿ ಹಾಕುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರ ಬಗ್ಗೆ ಈ ಸರಕಾರಕ್ಕೆ ಕಾಳಜಿ ಇಲ್ಲ. ಅಭಿವೃದ್ಧಿ ಆಗುತ್ತಿಲ್ಲ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರಕಾರಿ ನೌಕರರಿಗೆ ಸಂಬಳ ಕೊಡಲು ಸಾಧ್ಯ ಆಗುತ್ತಿಲ್ಲ ಎಂದು ಅವರು ದೂರಿದರು.

ಪ್ರಿಯಾಂಕ್ ಖರ್ಗೆ ತಿರುಕನ ಕನಸು: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಆರೆಸ್ಸೆಸ್ ನಿಷೇಧಿಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವ ಕುರಿತು ಕೇಳೀದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಮೂರ್ಖತನದ ಹೇಳಿಕೆಗೆ ನಾವು ಪ್ರತಿಕ್ರಿಯೆ ಕೊಡುವುದಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರವು ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ದೇಶವೂ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕುರಿತು ಪ್ರಿಯಾಂಕ್ ಖರ್ಗೆ ತಿರುಕನ ಕನಸು ಕಾಣುತ್ತಿದ್ದರೆ ಎಂದು ಅವರು ವ್ಯಂಗ್ಯವಾಡಿದರು.

ಆಂತರಿಕ ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದೆ: ‘ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೆಲವು ಜಿಲ್ಲೆಗಳಲ್ಲಿ ನಮ್ಮ ಪಕ್ಷದೊಳಗೆ ಇದ್ದ ಆಂತರಿಕ ಸಮಸ್ಯೆ ಪರಿಹರಿಸುತ್ತಿದ್ದಾರೆ. ಸಣ್ಣಪುಟ್ಟ ಸಮಸ್ಯೆ ಪರಿಹರಿಸುವಂತೆ ನಾನೇ ಅವರಿಗೆ ಮನವಿ ಮಾಡಿದ್ದೆ. ಅದರಂತೆ ಸಮಯ ಕೊಟ್ಟು ಸಮಸ್ಯೆ ತಿಳಿಗೊಳಿಸುವ ಕೆಲಸ ಮಾಡುತ್ತಿದ್ದಾರೆ’

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News