ವಿಪಕ್ಷದ ಶಾಸಕರನ್ನು ಶತ್ರುಗಳಂತೆ ಪರಿಗಣಿಸಿರುವ ಕಾಂಗ್ರೆಸ್ ಸರಕಾರ: ವಿಜಯೇಂದ್ರ
ಬೆಂಗಳೂರು : ವಿಪಕ್ಷದ ಶಾಸಕರನ್ನು ಶತ್ರುಗಳಂತೆ ಪರಿಗಣಿಸಿರುವ ಕಾಂಗ್ರೆಸ್ ಸರಕಾರ ಈ ಹಿಂದಿನಿಂದಲೂ ಬಿಜೆಪಿ ಶಾಸಕರನ್ನು ಒಂದಿಲ್ಲೊಂದು ಪ್ರಕರಣಗಳಲ್ಲಿ ಸಿಲುಕಿಸಲು ಯತ್ನಿಸುತ್ತಲೇ ಇದೆ, ಅದರ ಮುಂದುವರೆದ ಭಾಗವಾಗಿ ಮಾಜಿ ಸಚಿವ ಬೈರತಿ ಬಸವರಾಜ ವಿರುದ್ಧ ಸಂಬಂಧವೇ ಪಡದ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಸುವ ಪ್ರಯತ್ನ ನಡೆದಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಶನಿವಾರ ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, ರೌಡಿಶೀಟರ್ ಹತ್ಯೆ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಯೂ ಆಗಿರುವ ಮೃತನ ತಾಯಿ ತಾನು ಬೈರತಿ ಬಸವರಾಜ ಅವರ ಹೆಸರು ಹೇಳಿಯೂ ಇಲ್ಲ, ದೂರಿನಲ್ಲಿ ಅವರ ಹೆಸರು ಸೇರಿಸಿಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, ಆದಾಗ್ಯೂ ಪೊಲೀಸರು ಬೈರತಿ ಬಸವರಾಜ ಅವರ ಹೆಸರನ್ನು ಎಫ್.ಐ.ಆರ್ ನಲ್ಲಿ ಸೇರಿಸಿರುವುದರ ಹಿಂದೆ ಅಡಗಿರುವುದು ರಾಜಕೀಯ ಪಿತೂರಿಯಲ್ಲದೇ ಬೇರೇನೂ ಅಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರಕಾರ ವೈಫಲ್ಯ, ದುರಾಡಳಿತ, ಭ್ರಷ್ಟಾಚಾರ ಹಾಗೂ ಆಂತರಿಕ ಕಲಹದಿಂದ ಕುಸಿದು ಹೋಗುತ್ತಿದ್ದು, ಹತಾಶೆಯ ಅಂಚಿಗೆ ತಲುಪಿರುವ ಕಾಂಗ್ರೆಸ್ ರಾಜಕಾರಣ ಜನರ ದಿಕ್ಕನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಶಾಸಕರ ವಿರುದ್ಧ ಷಡ್ಯಂತ್ರ ರೂಪಿಸಿ ಸುಳ್ಳು ಪೊಲೀಸ್ ದೂರುಗಳನ್ನು ದಾಖಲಿಸಿ ಅವರ ಹೆಸರಿಗೆ ಕಳಂಕ ತರುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದೆ ಎಂದು ಅವರು ಟೀಕಿಸಿದ್ದಾರೆ.
ಸೇಡಿನ ರಾಜಕಾರಣವೇ ಕಾಂಗ್ರೆಸ್ ಪಕ್ಷದ ಅಸ್ತ್ರವಾದರೆ ಅದನ್ನು ನಿಷ್ಕ್ರಿಯಗೊಳಿಸುವ ಶಕ್ತಿ ಬಿಜೆಪಿಗಿದೆ. ಆಡಳಿತ ಯಂತ್ರ, ಪೊಲೀಸ್ ಬಲ ಜನರ ರಕ್ಷಣೆಗೆ ಎಂಬುದನ್ನು ಮರೆತು ಕಾಂಗ್ರೆಸ್ ಪಕ್ಷ ರಾಜಕಾರಣಕ್ಕೆ ಅದನ್ನು ಬಳಸಿಕೊಳ್ಳುತ್ತಿದೆ ಎಂದು ವಿಜಯೇಂದ್ರ ದೂರಿದ್ದಾರೆ.
ಶಾಸಕ ಬೈರತಿ ಬಸವರಾಜ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಜನೋಪಕಾರಿ ಕೆಲಸಗಳಿಂದ ಜನಪ್ರಿಯರಾಗಿ ಗೆದ್ದು ಬರುತ್ತಿದ್ದು, ಅವರ ಏಳಿಗೆ ಸಹಿಸದೆ ಅವರ ಮೇಲೆ ಕೊಲೆ ಆರೋಪದ ಸಂಚು ರೂಪಿಸಿರುವ ಷಡ್ಯಂತ್ರ ಇಷ್ಟರಲ್ಲೇ ಬಯಲಾಗಲಿದೆ. ಬೈರತಿ ಬಸವರಾಜ ಅವರ ಬೆನ್ನಿಗೆ ಬಿಜೆಪಿ ನಿಲ್ಲಲಿದೆ ಎಂದು ಅವರು ಹೇಳಿದ್ದಾರೆ.
ವಿರೋಧ ಪಕ್ಷದ ಶಾಸಕರನ್ನು ಶತ್ರುಗಳಂತೆ ಪರಿಗಣಿಸಿರುವ ಕಾಂಗ್ರೆಸ್ ಸರ್ಕಾರ ಈ ಹಿಂದಿನಿಂದಲೂ ಬಿಜೆಪಿ ಶಾಸಕರನ್ನು ಒಂದಿಲ್ಲೊಂದು ಪ್ರಕರಣಗಳಲ್ಲಿ ಸಿಲುಕಿಸಲು ಯತ್ನಿಸುತ್ತಲೇ ಇದೆ, ಅದರ ಮುಂದುವರೆದ ಭಾಗವಾಗಿ ಮಾಜಿ ಸಚಿವರೂ ಆದ ನಮ್ಮ ಪಕ್ಷದ ಶಾಸಕರಾದ @BABasavaraja ಅವರ ವಿರುದ್ಧ ಸಂಬಂಧವೇ ಪಡದ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಸುವ ಪ್ರಯತ್ನ… pic.twitter.com/yrGS4f95MX
— Vijayendra Yediyurappa (@BYVijayendra) July 19, 2025