ಕಂಪ್ಲಿ | ವಿದ್ಯಾರ್ಥಿನಿಯರು ಶಿಕ್ಷಣದ ಮೂಲಕ ಭವಿಷ್ಯ ರೂಪಿಸಿಕೊಳ್ಳಲಿ: ಮದ್ದಾನಪ್ಪ ಬಿಡನಾಳ
ಕಂಪ್ಲಿ : ಪಟ್ಟಣದ ಮದರ್ ತೆರೇಸಾ ಪ್ರಿ-ಯೂನಿವರ್ಸಿಟಿ ಕಾಲೆಜ್ ಹಾಗೂ ವಿನುಠನಾ ಮಹಿಳಾ ಪದವಿ ಕಾಲೇಜುಗಳಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡಿಗೆ, ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನೇತೃತ್ವವಹಿಸಿ ಮಾತನಾಡಿದ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಮದ್ದಾನಪ್ಪ ಬಿಡನಾಳ ಅವರು, ವಿದ್ಯಾರ್ಥಿನಿಯರು ಉತ್ತಮವಾಗಿ ಓದಿ ಶೈಕ್ಷಣಿಕ ಪ್ರಗತಿ ಸಾಧಿಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಶಿಕ್ಷಣವೇ ಭವಿಷ್ಯದ ದಾರಿ ದೀಪ ಎಂದು ಅಭಿಪ್ರಾಯಪಟ್ಟರು.
ನಮ್ಮ ಸಂಸ್ಥೆ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣ ನೀಡಲು ಸದಾ ಶ್ರಮಿಸುತ್ತಿದೆ. ಶಿಕ್ಷಣವು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮೂಲ ಅಸ್ತ್ರವಾಗಿದೆ. ಶಿಸ್ತು, ತಾಳ್ಮೆ ಹಾಗೂ ಏಕಾಗ್ರತೆಯನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಶಾಸಕ ಜೆ.ಎನ್. ಗಣೇಶ್ ಉದ್ಘಾಟಿಸಿದರು. ಹೆಚ್. ವೀರಾಪುರದ ಶಿವಲಿಂಗ ಮಠದ ಜಡೇಶ್ ತಾತ ದಿವ್ಯಸಾನಿಧ್ಯ ವಹಿಸಿದ್ದರು. ವಿವಿಎಸ್‌ಎಸ್ ಟ್ರಸ್ಟ್ ಅಧ್ಯಕ್ಷೆ ರಾಜಮ್ಮ ಹುಲುಗಪ್ಪ ಅಧ್ಯಕ್ಷತೆ ವಹಿಸಿದ್ದರು.
ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ಇಂದ್ರಜಾ, ಗೌಡ್ರು ರಷ್ಮಿ, ತುಂಗಭದ್ರ, ಕೆ.ಎಂ. ಪವಿತ್ರಾ, ಜಿ. ಸಿದ್ದೇಶ್ವರಿ, ಎಂ. ಸುನಂದಾ, ಎನ್. ಭಾಗ್ಯಮ್ಮ, ಎಂ. ಐಶ್ವರ್ಯ, ಕೆ. ಅಕ್ಷತಾ, ಕೆ. ಅಂಜಲಿ, ಶಮಾ ಪರ್ವಿನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ಅದ್ಧೂರಿಯಾಗಿ ಬೀಳ್ಕೊಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಕನ್ನಡ ಸೇರಿದಂತೆ ವಿವಿಧ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ. ಮೂಕಯ್ಯಸ್ವಾಮಿ, ಅಕ್ಕಿ ಗಿರಣಿ ಮಾಲಿಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಪುರಸಭೆ ಮಾಜಿ ಸದಸ್ಯ ಸಿ.ಆರ್. ಹನುಮಂತ, ವಿವಿಎಸ್‌ಎಸ್ ಟ್ರಸ್ಟ್ ಕಾರ್ಯದರ್ಶಿ ಪ್ರಕಾಶ್ ನಾಯಕ, ಪ್ರಾಚಾರ್ಯ ಮಹಮ್ಮದ್ ಶಫಿ, ಬಸವರಾಜಸ್ವಾಮಿ, ಮಹಾಬಲೇಶ್ವರಪ್ಪ, ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪುರಸ್ಕೃತೆ ಶಾಂತ ಗಡ್ಡದ್, ವಸತಿ ನಿಲಯ ಪಾಲಕಿ ಎಂ.ಬಿ. ಶುಭಾ ಸೋಮಶೇಖರ, ವೈದ್ಯಕೀಯ ಕ್ಷೇತ್ರದ ಡಾ. ಶ್ರದ್ಧಾ ಭರತ್, ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಶೋಭಾ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.