×
Ad

ಪ್ರತಿ ಟನ್‌ ಕಬ್ಬಿಗೆ 3,300 ರೂ. ಘೋಷಣೆ ; ಆರ್‌.ಅಶೋಕ್‌, ವಿಜಯೇಂದ್ರ ಹೇಳಿದ್ದೇನು?

Update: 2025-11-08 12:13 IST

ಬೆಳಗಾವಿ : ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜ್ಯ ಸರಕಾರ ಮಣಿದಿದ್ದು, ಪ್ರತಿ ಟನ್ ಕಬ್ಬಿಗೆ 3,300 ರೂ. ನೀಡಲು ಒಪ್ಪಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ ಹಾಗೂ ಹತ್ತರಗಿ ಟೋಲ್‌ಗೇಟ್ ಬಳಿ ರೈತರು ಸಂಭ್ರಮಾಚರಣೆ ನಡೆಸಿದ್ದಾರೆ.

ಈ ಮಧ್ಯೆ ಪ್ರತಿ ಟನ್ ಕಬ್ಬಿಗೆ 100 ರೂ.‌ ಹೆಚ್ಚಿಸಿರುವ ಸರಕಾರದ ತೀರ್ಮಾನವನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.‌ ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಮಾಲೀಕರ ಮಹತ್ವದ ಸಭೆಯಲ್ಲಿ ತೆಗೆದುಕೊಂಡ ಮಹತ್ತರ ತೀರ್ಮಾನವನ್ನು ಸ್ವಾಗತಿಸುವೆ ಎಂದು ಹೇಳಿದ್ದಾರೆ.

ಇದು ಕಬ್ಬು ಬೆಳೆಗಾರರು, ರೈತ ಸಂಘದ ಹೋರಾಟಕ್ಕೆ ಸಂದ ಜಯ. ಮುಖ್ಯಮಂತ್ರಿಗಳು ಕಳೆದ ಕೆಲವು ದಿನಗಳಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‍ನಲ್ಲಿ ಕಬ್ಬು ಬೆಳೆಗಾರರು, ರಾಜ್ಯ ರೈತ ಸಂಘ, ಹಸಿರು ಸೇನೆ ಶಾಂತಿಯುತ ಹೋರಾಟ ನಡೆಸಿದ್ದರು.  ಒಂದು ಅಥವಾ ಎರಡು ತಿಂಗಳ ಮೊದಲೇ ಈ ಸಭೆ ನಡೆಸಬೇಕಿತ್ತು. ರೈತರು ಬೀದಿಗಿಳಿದು ಹೋರಾಟ ಮಾಡಿ, ಆ ಹೋರಾಟವು ರಾಜ್ಯದ ಇತರ ಜಿಲ್ಲೆಗಳಿಗೆ ಹಬ್ಬುವ ಸಂದರ್ಭದಲ್ಲಿ ನಾವು ಕೂಡ ಹೋರಾಟದ ಸ್ಥಳಕ್ಕೆ ಭೇಟಿ ಕೊಟ್ಟು ಹೋರಾಟಕ್ಕೆ ಬೆಂಬಲ ನೀಡಿದ್ದೆವು. ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರಕಾರ,  ಈ ಸಭೆ ಕರೆದಿದ್ದರು. ಮುಖ್ಯಮಂತ್ರಿಗಳು ತುಮಕೂರಿನ ಎಲ್ಲ ಕಾರ್ಯಕ್ರಮಗಳನ್ನೂ ರದ್ದು ಮಾಡಿ ಈ ಸಭೆ ನಡೆಸಿದ್ದಾರೆ. ಸಭೆಯ ತೀರ್ಮಾನವನ್ನು ಸ್ವಾಗತಿಸುವೆ ಎಂದು ತಿಳಿಸಿದ್ದಾರೆ.

ವಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಕಬ್ಬು ಬೆಳೆಗಾರರು ನಡೆಸಿದ ಸಂಘಟಿತ ಹೋರಾಟಕ್ಕೆ ಮಣಿದಿರುವ ರಾಜ್ಯ ಕಾಂಗ್ರೆಸ್ ಸರಕಾರ ಪ್ರತಿ ಟನ್ ಕಬ್ಬಿಗೆ 3,300 ದರ ನಿಗದಿಪಡಿಸಿ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಹೇಳಿದ್ದಾರೆ.

ಕಬ್ಬು ಕಟಾವು, ಲೋಡಿಂಗ್‌, ಸಾಗಣೆ ಮತ್ತು ಅನ್‌ಲೋಡಿಂಗ್‌ ಸಂದರ್ಭದಲ್ಲಿ ರೈತರಿಗೆ ಆಗುವ ಸುಲಿಗೆ ಮತ್ತು ವಂಚನೆ, ಸಕ್ಕರೆ ಕಾರ್ಖಾನೆಗಳಲ್ಲಿ ತೂಕ ಹಾಕುವ ಸಂದರ್ಭದಲ್ಲಿ ಆಗುವ ಮೋಸ, ಕಬ್ಬು ಪೂರೈಸಿದ 14 ದಿನಗಳೊಳಗೆ ರೈತರಿಗೆ ಸಂಪೂರ್ಣ ಹಣ ಪಾವತಿ ಮಾಡಬೇಕು ಎಂಬ ನಿಯಮವಿದ್ದರೂ ಬಿಲ್ ಪಾವತಿ ವಿಳಂಬ ಆಗುವುದು, ಈ ರೀತಿ ಅನೇಕ ಸಮಸ್ಯೆಗಳನ್ನು ನಮ್ಮ ರೈತರು ಎದುರಿಸುತ್ತಲೇ ಇದ್ದಾರೆ. ಈ ಬಾರಿ ಯಾವ ಸಮಸ್ಯೆಯೂ ಬರದಂತೆ ರೈತರಿಗೆ ಸಕಾಲಕ್ಕೆ ಸಿಗಬೇಕಾದ ನ್ಯಾಯಯುತ ಹಣ ಸಿಗುವಂತೆ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕೆಂದು ಅವರುರಾಜ್ಯ ಸರಕಾರವನ್ನು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News