×
Ad

ಸಮಾಜಕ್ಕೆ 'ವಾರ್ತಾ ಭಾರತಿ'ಯಂತಹ ಸತ್ಯ ಸುದ್ದಿ ಬಿತ್ತರಿಸುವ ಮಾಧ್ಯಮಗಳ ಅವಶ್ಯಕತೆಯಿದೆ : ಡಾ.ಚನ್ನಬಸವಾನಂದ ಸ್ವಾಮೀಜಿ

ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಪ್ರಯುಕ್ತ ಬೀದರ್‌ನಲ್ಲಿ ಓದುಗರು, ಹಿತೈಷಿಗಳ ಸಭೆ

Update: 2025-11-29 20:40 IST

ಬೀದರ್ :  ಒಂದು ಪತ್ರಿಕೆ ನಿರ್ಭೀತವಾಗಿ ಸಮಾಜಕ್ಕೆ ಬೇಕಾದ ಸತ್ಯ ಸಂಗತಿಯನ್ನು ತಿಳಿಸುವಂತಹ ಕೆಲಸ ಮಾಡುವುದು ತುಂಬಾ ಕಷ್ಟ. ಇಂತಹ ಕಾಲಘಟ್ಟದಲ್ಲಿ ಸಮಾಜಕ್ಕೆ 'ವಾರ್ತಾ ಭಾರತಿ'ಯಂತಹ ಸತ್ಯ ಸುದ್ದಿ ಬಿತ್ತರಿಸುವ ಮಾಧ್ಯಮಗಳ ಅವಶ್ಯಕತೆಯಿದೆ ಎಂದು  ಬೆಂಗಳೂರಿನ ಚನ್ನಬಸವೇಶ್ವರ್ ಜ್ಞಾನಪೀಠದ ಶ್ರೀ ಡಾ.ಚನ್ನಬಸವಾನಂದ್ ಸ್ವಾಮೀಜಿ ಹೇಳಿದರು. 

ವಾರ್ತಾಭಾರತಿ ಕಲಬುರಗಿಯಿಂದ ಕಲ್ಯಾಣ ಕರ್ನಾಟ ಆವೃತ್ತಿ ಬಿಡುಗಡೆ ಪ್ರಯುಕ್ತ ಬೀದರ್‌ ನಗರದ ಹೋಟೆಲ್ ದ ಕೃಷ್ಣ ರೆಜನ್ಸಿಯಲ್ಲಿ ನಡೆದ ಓದುಗರು, ವೀಕ್ಷಕರ ಹಾಗೂ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಡಾ.ಚನ್ನಬಸವಾನಂದ್ ಸ್ವಾಮೀಜಿ, ವಾರ್ತಾ ಭಾರತಿ ಪತ್ರಿಕೆಯು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಚಾರ ಪಡೆಯಬೇಕು. ಯಾವುದೇ ಆಮಿಷ, ಒತ್ತಡಗಳಿಗೆ ಒಳಗಾಗದೆ ಸುದ್ದಿ ಪ್ರಚಾರ ಮಾಡುವ ಮತ್ತು ಸಮಾಜದಲ್ಲಿ ಸತ್ಯ ಸುದ್ದಿಗಳನ್ನು ಬಿತ್ತರಿಸುವ ಮಾಧ್ಯಮಗಳ ಅವಶ್ಯಕತೆ ಇದೆ ಎಂದು ಹೇಳಿದರು.  

ನಾವು ವಾರ್ತಾಭಾರತಿ ಪತ್ರಿಕೆಯ ಓದುಗರಾಗಿದ್ದೇವೆ ಮತ್ತು ಹಿತೈಷಿಗಳಾಗಿದ್ದೇವೆ. ಇವತ್ತಿನ ಪರಿಸ್ಥಿತಿ ಹೇಗಿದೆ ಎಂದರೆ ಸತ್ಯವನ್ನು ಸಮಾಜಕ್ಕೆ ತಿಳಿಸುವುದು ಕಷ್ಟಕರವಾಗಿದೆ. ಮಾಧ್ಯಮಗಳು ಮತ್ತು ನ್ಯಾಯಾಲಯಗಳು ಸ್ವತಂತ್ರವಾಗಿರಬೇಕು. ಆದರೆ ಇವತ್ತು ಪತ್ರಿಕೆಗಳು ಸ್ವತಂತ್ರವನ್ನು ಕಳೆದುಕೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಠಲದಾಸ್ ಪ್ಯಾಗೆ ಅವರು ಮಾತನಾಡಿ, ಜನರಿಗೆ ನೈಜ ಸುದ್ದಿಯನ್ನು ನೀಡುವ ಜವಾಬ್ದಾರಿಯನ್ನು ಹೊತ್ತುಕೊಂಡಿರುವಂತಹ ಕನ್ನಡ ಮಾಧ್ಯಮಗಳಲ್ಲಿ ವಾರ್ತಾ ಭಾರತಿ ಪತ್ರಿಕೆ ಮುಂಚೂಣಿಯಲ್ಲಿದೆ. ಇಂತಹ ಪತ್ರಿಕೆ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಲಭ್ಯವಾಗುತ್ತಿರುವುದು ಸಂತಸವನ್ನು ತಂದಿದೆ ಎಂದು ಹೇಳಿದರು.  

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ್ ಅತಿವಾಳೆ ಅವರು ಮಾತನಾಡಿ, ವಾರ್ತಾಭಾರತಿ ಪತ್ರಿಕೆಯು ನಾಡಿನಲ್ಲಿ ವೈಚಾರಿಕತೆಯನ್ನು ಬೆಳೆಸುವ ಹಾಗೂ ಮೌಢ್ಯ ಅಳಿಸುವಂತಹ ಕೆಲಸ ಮಾಡುತ್ತಿದೆ ಎಂದು ಹೇಳಿದರು.  

ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿ, ಯಾವುದೇ ಬಂಡವಾಳಿಗರ ಆಮಿಷಕ್ಕೆ ಒಳಗಾಗದೆ ನಾವು ವಾರ್ತಾ ಭಾರತಿ ಪತ್ರಿಕೆಯನ್ನು ಮುನ್ನಡೆಸುತ್ತಿದ್ದೇವೆ. ನಿರ್ಭಯವಾಗಿ ಜನರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಕಾರ್ಮಿಕ ಮುಖಂಡ ಬಾಬುರಾವ್ ಹೊನ್ನಾ ಅವರು ಮಾತನಾಡಿ, ವಾರ್ತಾಭಾರತಿ ಪತ್ರಿಕೆಗೆ ಪ್ರೋತ್ಸಾಹ ನೀಡಬೇಕು. ವಾರ್ತಾಭಾರತಿ ಪತ್ರಿಕೆಯನ್ನು ಕಲ್ಯಾಣ ಕರ್ನಾಟಕ ಅದರಲ್ಲೂ ಬೀದರ್ ಜಿಲ್ಲೆಗೆ ನಾವು ಸ್ವಾಗತಿಸುತ್ತೇವೆ ಮತ್ತು ಪತ್ರಿಕೆಯನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.  

ಡಿಸೆಂಬರ್‌ 20ರಂದು ಬೆಳಿಗ್ಗೆ 10.30ಕ್ಕೆ ಕಲಬುರಗಿಯ ಎಸ್‌ ಎಂ ಪಂಡಿತ್‌ ರಂಗ ಮಂದಿರದಲ್ಲಿ ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತಿ ಬಿಡುಗಡೆಯಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News