×
Ad

ಅಂಗನವಾಡಿ ನೇಮಕಾತಿಯಲ್ಲಿ ಇನ್ನಷ್ಟು ಸರಳ, ಪಾರದರ್ಶಕವಾಗಲು ಕ್ರಮಕೈಗೊಳ್ಳಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Update: 2025-07-04 19:17 IST

ಬೀದರ್ : ಅಂಗನವಾಡಿ ನೇಮಕಾತಿಯಲ್ಲಿ ಇನ್ನಷ್ಟು ಸರಳ ಮತ್ತು ಹೆಚ್ಚಿನ ಪಾರದರ್ಶಕತೆವಾಗಿರಲು ಕ್ರಮ ಕೈಗೊಳ್ಳಬೇಕು. ಗರಿಷ್ಠ ಮೂರು ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಲಬುರಗಿ ವಿಭಾಗೀಯ ಮಟ್ಟದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮೊದಲ ದಿನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವುದೇ ಕಾರಣದಿಂದಲೂ ನೇಮಕಾತಿಗಳು ವಿಳಂಬವಾಗದಂತೆ ನೋಡಿಕೊಳ್ಳಬೇಕು. ನೇಮಕಾತಿ ವೇಳೆ ಸಮಸ್ಯೆಗಳು ಕಂಡು ಬಂದಲ್ಲಿ, ತಕ್ಷಣವೇ ಪರಿಹರಿಸಬೇಕು. ನಮ್ಮ ಇಲಾಖೆಯು ಜನರಿಗೆ, ಜನರ ಬದುಕಿಗೆ ಹತ್ತಿರವಾದ ಇಲಾಖೆಯಾಗಿದ್ದು, ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ಮಾಡದೆ ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ಕೇಂದ್ರ ಹಾಗೂ ರಾಜ್ಯದಿಂದ ಕಾಲಕಾಲಕ್ಕೆ ನೀಡಲಾಗುವ ಗುರಿಯನ್ನು ತಲುಪಲೇಬೇಕು. ಅನೇಕ ಕಡೆ ಮಕ್ಕಳಿಗೆ ಸರಿಯಾಗಿ ಮೊಟ್ಟೆ ತಲುಪುತ್ತಿಲ್ಲ. ಹಾಲಿನ ಪೌಡರ್ ಮಾರಿಕೊಳ್ಳುತ್ತಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಅದು ನಿಜವಾಗಿದ್ದರೆ ಅಂಥವು ಎಂದಿಗೂ ಸಹಿಸಿಕೊಳ್ಳದೇ, ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಪ್ರತಿ ಅಧಿಕಾರಿಗಳು, ಸ್ಥಳೀಯ ಸಚಿವರು ಹಾಗೂ ಶಾಸಕರಿಗೆ ಇಲಾಖೆ ಕಾರ್ಯಕ್ರಮ ಮತ್ತು ಪ್ರಗತಿಯ ವಿವರಗಳನ್ನು ಕಾಲಕಾಲಕ್ಕೆ ಕಡ್ಡಾಯವಾಗಿ ನೀಡಬೇಕು ಎಂದು ಅವರು ಆದೇಶಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಮಾತನಾಡಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಮ್ಮ ಸರ್ಕಾರದ ಬಹಳ ಕ್ರಿಯಾಶೀಲ ಸಚಿವರಾಗಿದ್ದಾರೆ. ಮಹಿಳೆಯರು, ಮಕ್ಕಳು, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಬಗ್ಗೆ ವಿಶೇಷ ಕಾಳಜಿವಹಿಸಿ ಅವರು ಕೆಲಸ ಮಾಡುತ್ತಿದ್ದಾರೆ. ಸದಾ ಹೆಚ್ಚಿನ ಅನುದಾನಕ್ಕಾಗಿ ಪ್ರಯತ್ನಿಸುತ್ತಲೇ ಇರುತ್ತಾರೆ. ಜವಾಬ್ದಾರಿಯುತವಾಗಿ ಇಲಾಖೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಒಳಗೊಂಡ ಕಲಬುರಗಿ ವಿಭಾಗದ ಮಟ್ಟದಲ್ಲಿ ಐಸಿಡಿಎಸ್ ಶಾಖೆಯಲ್ಲಿ ಕೈಗೊಂಡಿರುವ ಪ್ರಗತಿ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.

ಈ ಸಭೆಯಲ್ಲಿ ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್, ಇಲಾಖೆಯ ಕಾರ್ಯದರ್ಶಿ ಶಾಮ್ಲಾ ಇಕ್ಬಾಲ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ರಾಘವೇಂದ್ರ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಹಾಗೂ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್ ಸೇರಿದಂತೆ ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News