×
Ad

ಬಿಹಾರ ಸಂಪುಟ ಕಸರತ್ತು: ಬಿಜೆಪಿಗೆ ಗೃಹ ಖಾತೆ ನೀಡಿ, ಹಣಕಾಸು ಖಾತೆ ಪಡೆದ ಜೆಡಿಯು

Update: 2025-11-22 07:29 IST

PC: x.com/the_hindu

ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎರಡು ದಶಕಗಳ ಅಧಿಕಾರಾವಧಿಯಲ್ಲಿ ಮೊಟ್ಟಮೊದಲ ಬಾರಿಗೆ ಗೃಹಖಾತೆಯನ್ನು ಮಿತ್ರಪಕ್ಷಕ್ಕೆ ಬಿಟ್ಟುಕೊಟ್ಟಿದ್ದು, ಬಿಜೆಪಿ ಈ ಮೊದಲು ಹೊಂದಿದ್ದ ಹಣಕಾಸು ಖಾತೆಯನ್ನು ಜೆಡಿಯು ಪಡೆದುಕೊಂಡಿದೆ.

ಇದು ಮಿತ್ರಪಕ್ಷಗಳ ನಡುವಿನ ವಿನಿಮಯ ಎಂದು ಮೇಲ್ನೋಟಕ್ಕೆ ಅನಿಸಿದರೂ, ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿಯವರಿಗೆ ಗೃಹಖಾತೆಯನ್ನು ನೀಡುವ ಮೂಲಕ ಪೊಲೀಸ್, ಗುಪ್ತಚರ, ಸಾಮಾನ್ಯ ಕಾನೂನು ಮತ್ತು ಸುವ್ಯವಸ್ಥೆಯಂಥ ಪ್ರಮುಖ ಕ್ಷೇತ್ರಗಳನ್ನು ಹೊಂದಿರುವ ಇಲಾಖೆಯ ಮೇಲಿನ ನಿಯಂತ್ರಣ ಹೊಂದುವುದಕ್ಕೆ ವಿಶೇಷ ಮಹತ್ವವಿದೆ. ಬಹುತೇಕ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳೇ ಈ ಹುದ್ದೆಯನ್ನು ಉಳಿಸಿಕೊಳ್ಳುತ್ತಾರೆ. ಜತೆಗೆ ಕಂದಾಯ ಮತ್ತು ಭೂಸುಧಾರಣೆ, ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆಯನ್ನು ಹೊಂದಿರುವ ಬಿಜೆಪಿಯ ಮತ್ತೊಬ್ಬ ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ ಅವರಿಗೆ ಹೋಲಿಸಿದರೆ, ಸಾಮ್ರಾಟ್ ಮೇಲುಗೈ ಸಾಧಿಸಿದಂತಾಗಿದೆ.

ಹಿಂದಿನ ಸರ್ಕಾರದಲ್ಲಿ ಚೌಧರಿ ಹೊಂದಿದ್ದ ಹಣಕಾಸು ಮತ್ತು ವಾಣಿಜ್ಯ ತೆರಿಗೆ ಖಾತೆ ಈ ಬಾರಿ ಜೆಡಿಯು ಪಕ್ಷದ ಬೀರೇಂದ್ರ ಪ್ರಸಾದ್ ಯಾದವ್ ಅವರ ಪಾಲಾಗಿದೆ. ಕುಶ್ವಾಹ ಸಮುದಾಯದ ಪ್ರಮುಖ ನೇತಾರ ಎನಿಸಿಕೊಂಡಿರುವ ಚೌಧರಿ, ರಾಜ್ಯದ ಕಾನೂನು ಹಾಗೂ ಸುವ್ಯವಸ್ಥೆ ಹೊಣೆ ಪಡೆದಿದ್ದು, ಇತರ ಯಾವುದೇ ಖಾತೆಗಳಿಲ್ಲ.

ಹಣಕಾಸು ಖಾತೆಯ ಆದಾಯ ಸೃಷ್ಟಿ ರಾಜ್ಯದಲ್ಲಿ ಜಿಎಸ್‌ಟಿ ಜಾರಿಗೆ ಸೀಮಿತವಾಗಿರುವುದರಿಂದ ತನ್ನ ಕಾಂತಿ ಕಳೆದುಕೊಂಡಿದೆ. ಏಕೆಂದರೆ ಬಿಹಾರದಲ್ಲಿ 2016ರಲ್ಲಿ ಪಾನ ನಿಷೇಧ ಜಾರಿಯಾದಾಗಿನಿಂದ ಅಬ್ಕಾರಿ ಕ್ಷೇತ್ರ ಆದಾಯ ಮೂಲವಾಗಿ ಉಳಿದಿಲ್ಲ.

'ಸುಶಾಸನ ಬಾಬು' ಖ್ಯಾತಿ ಹೊಂದಿದ್ದ ನಿತೀಶ್, ಕನಿಷ್ಠ ರಾಜಕೀಯ ಹಸ್ತಕ್ಷೇಪದ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮೂಲಕ ಹೆಸರು ಮಾಡಿದ್ದರು. ಆದರೆ ಇದೀಗ ಈ ಹೊಣೆ ಬಿಜೆಪಿ ಪಾಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News