ರಾಜೀನಾಮೆಗೆ ಮುನ್ನ ಧನ್ಕರ್ ಮನವೊಲಿಕೆಗೆ ಕೊನೆಕ್ಷಣದ ಪ್ರಯತ್ನ ಮಾಡಿದ್ದ ಬಿಜೆಪಿ!
ಜಗದೀಪ್ ಧನ್ಕರ್ | PTI
ಹೊಸದಿಲ್ಲಿ: ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಮಹಾಭಿಯೋಗಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳಿಂದ ಪ್ರಾಯೋಜಿತವಾಗಿದ್ದ ನೋಟಿಸ್ ವಿಚಾರದಲ್ಲಿ ಕೈಗೊಂಡ ನಿರ್ಧಾರದಿಂದ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಭೇಟಿ ಮಾಡಿ ಇಬ್ಬರು ಕೇಂದ್ರ ಸಚಿವರು ಮನವೊಲಿಸುವ ಪ್ರಯತ್ನ ಮಾಡಿದ್ದರು ಎಂಬ ಅಂಶ ಇದೀಗ ಬಹಿರಂಗವಾಗಿದೆ. ಉಪರಾಷ್ಟ್ರಪತಿಗಳ ಈ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮತಿ ಇರಲಿಲ್ಲ ಎನ್ನಲಾಗಿದೆ. ಆದರೆ ಸದನದ ನಿಯಮಾವಳಿಗೆ ಅನುಸಾರವಾಗಿ ತಾವು ಕಾರ್ಯ ನಿರ್ವಹಿಸಿದ್ದಾಗಿ 74 ವರ್ಷದ ಧನ್ಕರ್ ಸಮರ್ಥಿಸಿಕೊಂಡಿದ್ದರು ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
63 ಸದಸ್ಯರು ಸಹಿ ಮಾಡಿದ್ದ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧದ ಮಹಾಭಿಯೋಗ ನಿರ್ಣಯಕ್ಕೆ ಸಂಬಂಧಿಸಿದಂತೆ ಧನ್ಕರ್ ಅವರು ಸೋಮವಾರ ಮಾತನಾಡಿದ ಬಳಿಕ ಕೇಂದ್ರ ಆರೋಗ್ಯ ಸಚಿವ ಹಾಗೂ ರಾಜ್ಯಸಭೆ ನಾಯಕ ಜೆ.ಪಿ.ನಡ್ಡಾ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ಅವರು ಉಪರಾಷ್ಟ್ರಪತಿಗಳ ಜತೆ ಈ ಬಗ್ಗೆ ಚರ್ಚೆ ನಡೆಸಿದ್ದರು.
"ಲೋಕಸಭೆಯಲ್ಲಿ ಮಹಾಭಿಯೋಗದ ಬಗ್ಗೆ ಸಹಮತ ರೂಪುಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ರಿಜಿಜು ಹೇಳಿದರು. ಜತೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೋಟಿಸ್ ಗೆ ಸಹಿ ಮಾಡಿದ್ದನ್ನು ಉಲ್ಲೇಖಿಸಿದರು. ಈ ದಿಢೀರ್ ಬೆಳವಣಿಗೆಯಿಂದ ಪ್ರಧಾನಿ ಸಂತುಷ್ಟರಾಗಿಲ್ಲ ಎಂಬ ಸುಳಿವನ್ನೂ ಅವರು ನೀಡಿದ್ದರು" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಾಯಕರೊಬ್ಬರು ವಿವರಿಸಿದರು.
ಆದರೆ ಧನ್ಕರ್ ತಮ್ಮ ನಿಲುವಿಗೆ ಅಂಟಿಕೊಂಡು ಸದನದ ನಿಯಮಾವಳಿಯ ವ್ಯಾಪ್ತಿಯಲ್ಲೇ ತಾವು ಕ್ರಮ ಕೈಗೊಂಡಿದ್ದಾಗಿ ಸಮರ್ಥಿಸಿಕೊಂಡರು. ಈ ಮಾತುಕತೆಯ ಬಳಿಕ ಸಂಜೆ 4.30ಕ್ಕೆ ನಡೆದ ಕಲಾಪಗಳ ಸಲಹಾ ಸಮಿತಿಯ ಸಭೆಗೆ ಹಾಜರಾಗದೇ ಇರಲು ನಿರ್ಧರಿಸಿದರು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜ್ಯಸಭೆಯ ಮೊದಲ ಬಿಎಸಿ ಸಭೆ ಮಧ್ಯಾಹ್ನ 12.30ಕ್ಕೆ ನಡೆದಿತ್ತು.
ನ್ಯಾಯಮೂರ್ತಿ ವರ್ಮಾ ವಿರುದ್ಧದ ಮಹಾಭಿಯೋಗಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳಿಂದ ಪ್ರಾಯೋಜಿತವಾಗಿದ್ದ ನಿರ್ಣಯಕ್ಕೆ ಮಾಜಿ ಉಪರಾಷ್ಟ್ರಪತಿಗಳು ರಾಜ್ಯಸಭೆಯಲ್ಲಿ ಒಪ್ಪಿಗೆ ನೀಡಿದ್ದರೇ ಎಂಬ ತೀವ್ರ ಅನುಮಾನಗಳ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮತ್ತು ರಾಜ್ಯಸಭೆಯ ನಾಯಕ ಜೆ.ಪಿ.ನಡ್ಡಾ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.