ಪ್ರಚೋದನಾಕಾರಿ, ಶಾಂತಿ ಭಂಗಗೊಳಿಸುವ ಹೇಳಿಕೆ ಆರೋಪ; ಪ್ರಮೋದ್ ಮುತಾಲಿಕ್ ವಿರುದ್ಧ ಕ್ರಮಕ್ಕೆ ಒತ್ತಾಯ
ಫಕ್ರುದ್ದೀನ್ ಶಾ ಖಾದ್ರಿ
ಚಿಕ್ಕಮಗಳೂರು : ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾ ಕುರಿತು ಐತಿಹಾಸಿಕ ತಪ್ಪು, ಪ್ರಚೋದನಾಕಾರಿ ಮತ್ತು ಶಾಂತಿ ಭಂಗಗೊಳಿಸುವ ಹೇಳಿಕೆ ನೀಡಿದ್ದು, ಪೊಲೀಸ್ ಇಲಾಖೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೈಯದ್ ಬಾಬಾ ಬುಡಾನ್ ಶಾ ಖಾದ್ರಿ ವಂಶಸ್ಥ ಫಕ್ರುದ್ದೀನ್ ಶಾ ಖಾದ್ರಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುತಾಲಿಕ್ ಅವರು, ‘ಇಸ್ಲಾಮ್ ಧರ್ಮದಲ್ಲಿ ಆರತಿ, ಮೂರ್ತಿ ಪೂಜೆ ಇಲ್ಲ. ಆದ್ದರಿಂದ ದತ್ತಪೀಠವನ್ನು ಮುಸ್ಲಿಮರು ಹೇಗೆ ಆಳುತ್ತಾರೆ’ ಎಂದು ಹೇಳಿದ್ದು, ಇದು ಪ್ರಚೋದನಾಕಾರಿ ಹೇಳಿಕೆಯಾಗಿದೆ. ಬಾಬಾ ಬುಡಾನ್ ದರ್ಗಾದಲ್ಲಿ ಐತಿಹಾಸಿಕವಾಗಿ ಯಾವುದೇ ಮೂರ್ತಿ ಪೂಜೆ, ಆರತಿ ಅಥವಾ ಹಿಂದೂ ಪೂಜೆ ನಡೆದಿಲ್ಲ. ದರ್ಗಾವು ಚಿಲ್ಲಾ (ಧ್ಯಾನ ಸ್ಥಳ), ಪಾದುಕೆ, ದಾದಾ ಹಯಾತ್ ಗಾದಿ, ಪವಿತ್ರ ಕಲಿಮಾ ತಾಯೀಬ್ ದ್ವಾರ ಮತ್ತು ಹಲವು ಪವಿತ್ರ ಸಮಾಧಿಗಳು (ಗೋರಿಗಳು) ಸೇರಿದಂತೆ ಮಾಮಾ ಜಿಗ್ನಿ ಚಿಲ್ಲಾವನ್ನು ಒಳಗೊಂಡಿದೆ. ನಿಜವಾದ ಹಿಂದೂಗಳು ಖಬರಸ್ಥಾನ ಅಥವಾ ಸ್ಮಶಾನಗಳಲ್ಲಿರುವ ಸಮಾಧಿಗಳಿಗೆ ಪೂಜೆ ಮಾಡುವುದಿಲ್ಲ. ಆದರೆ, ಇಲ್ಲಿ ರಾಜಕೀಯ ಉದ್ದೇಶದಿಂದ ಕೆಲ ಮತೀಯ ಗುಂಪುಗಳು ಬಲವಂತವಾಗಿ ಧಾರ್ಮಿಕ ಚಟುವಟಿಕೆಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುತಾಲಿಕ್ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಇದು ಸಾರ್ವಜನಿಕರನ್ನು ತಪ್ಪು ದಾರಿಗೆ ತರುತ್ತವೆ ಮತ್ತು ಜಿಲ್ಲೆಯಲ್ಲಿನ ಶಾಂತಿಯನ್ನು ಹಾನಿಗೊಳಿಸಿ, ಇಲ್ಲಿನ ಸಾಂಪ್ರದಾಯಿಕ ಒಡನಾಟವನ್ನು ಭಂಗಗೊಳಿಸಲು ಕಾರಣವಾಗಬಹುದು. ಆದ್ದರಿಂದ ಪೊಲೀಸ್ ಇಲಾಖೆ ಈ ಸಂಬಂಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಫಕ್ರುದ್ದೀನ್ ಶಾ ಖಾದ್ರಿ ಆಗ್ರಹಿಸಿದ್ದಾರೆ.