ಹೊಸಮದಗದ ಕೆರೆ ಸಮೀಪ 50 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಕೆ.ಎಸ್.ಆನಂದ್
ಕಡೂರು : ಕಡೂರು ತಾಲೂಕನ್ನು ನೀರಾವರಿ ಪ್ರದೇಶವನ್ನಾಗಿ ಮಾಡಬೇಕೆಂಬುದೇ ತಮ್ಮ ಸಂಕಲ್ಪ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲೂಕಿನ ರೈತರ ಮತ್ತು 25 ಕೆರೆಗಳಿಗೆ ನೀರಿನ ಪ್ರಧಾನ ಆಸರೆಯಾಗಿರುವ ಹೊಸಮದಗದ ಕೆರೆಯ ಸಮೀಪ 50 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ ಗ್ರಾಮೀಣ ಕೆರೆಗಳಿಗೆ ಗುರುತ್ವಾಕರ್ಷಣೆ ಮೂಲಕ ನೀರುಣಿಸುವ ಈ ಹೊಸ ಮದಗದಕೆರೆ ಮತ್ತು ಕಾಲುವೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕೆಂಬ ತಮ್ಮ ಕನಸು ಇಂದು ಈಡೇರಿದೆ. ಇದಕ್ಕಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದ ಅವರು, ಹಿಂದಿನ ಸರಕಾರಗಳು ಈ ಮದಗದಕೆರೆ ಅಭಿವೃದ್ಧಿಗೆ ಅನುದಾನ ಕೊಟ್ಟಿವೆ, ಆದರೆ 50 ಕೋಟಿ ರೂ. ಅನುದಾನ ಸಿಕ್ಕಿರುವುದು ಇದೇ ಮೊದಲು ಎಂದರು.
ಈ ಕೆರೆಯಿಂದ 25 ಕೆರೆಗಳಿಗೆ ನೀರು ಹರಿದು ಹೋಗುವ ಮಾರ್ಗದ ಕಾಲುವೆಗಳ ಆಧುನೀಕರಣಗೊಳಿಸುವುದು ಈ ಪಟ್ಟಿಯಲ್ಲಿ ಸೇರಿದೆ. ಆದಷ್ಟು ಬೇಗ ಕಾಮಗಾರಿಗಳನ್ನು ಆರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಲ್ಲೂಕು ಪಂಚಾಯಿತಿ ಇಓ ಪ್ರವೀಣ್ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಭಂಡಾರಿ ಶ್ರೀನಿವಾಸ್, ಬೀರೂರು ದೇವರಾಜ್, ಮೋಹನ್ ಕುಮಾರ್, ಶ್ರೀ ಕಂಠ ಒಡೆಯರ್, ವನಿತಾಮಧು, ಕೆ.ಎಚ್.ಶಂಕರ್, ಸಣ್ಣ ನೀರಾವರಿ ಇಲಾಖೆಯ ಇಡಿ ರಾಮಚಂದ್ರಪ್ಪ, ಎಇಇ ದಕ್ಷಿಣಾಮೂರ್ತಿ ಮಂಜುನಾಥ್, ಎಮ್ಮೆ ದೊಡ್ಡಿ ಗ್ರಾಮಪಂಚಾಯ್ತಿ ಅಧ್ಯಕ್ಷ ರಾಜು , ಕಡೂರು ಬೀರೂರು ಅಡಿಕೆ ಬೆಳೆಗಾರರು ಉಪಸ್ಥಿತರಿದ್ದರು.