×
Ad

2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ; ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ, ಅರ್ಚನಾ ಜೋಯಿಸ್ ಅತ್ಯುತ್ತಮ ನಟಿ

Update: 2025-10-03 22:34 IST

ರಕ್ಷಿತ್ ಶೆಟ್ಟಿ, ಅರ್ಚನಾ ಜೋಯಿಸ್ (Photo source: X,instagram)

ಬೆಂಗಳೂರು: 2021ನೇ ಸಾಲಿನ ಕರ್ನಾಟಕ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಪ್ರಕಟಗೊಂಡಿದ್ದು, ರಕ್ಷಿತ್‌ ಶೆಟ್ಟಿ ಅವರು ‘ಚಾರ್ಲಿ 777’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದು, ಅರ್ಚನಾ ಜೋಯಿಸ್ ‘ಮ್ಯೂಟ್‌’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಅತ್ಯುತ್ತಮ ಮನೋರಂಜನಾ ಚಿತ್ರ ಎಂಬ ಹಿರಿಮೆಗೆ ಪಾತ್ರವಾಗಿದೆ.

ರಘು ಕೆ.ಎಂ. ನಿರ್ದೇಶನದ ‘ದೊಡ್ಡಹಟ್ಟಿ ಬೋರೇಗೌಡ’ ಮೊದಲನೇ ಅತ್ಯುತ್ತಮ ಚಿತ್ರವಾಗಿದ್ದು, ಕಿರಣ್‌ ರಾಜ್‌ ನಿರ್ದೇಶನದ ‘ಚಾರ್ಲಿ 777’ ಎರಡನೇ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಹೃದಯಶಿವ ಅವರ ನಿರ್ದೇಶನದ ‘ಬಿಸಿಲು ಕುದುರೆ’ ಮೂರನೇ ಅತ್ಯುತ್ತಮ ಚಿತ್ರವಾಗಿದೆ. ಕೃಷ್ಣಮೂರ್ತಿ ಚರಂ ನಿರ್ದೇಶನದ ‘ಭಾರತೀಯ ಪ್ರಜೆಗಳಾದ ನಾವು’ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರವಾಗಿ ಆಯ್ಕೆಗೊಂಡಿದೆ.

'ಕೇಕ್’ ಸಿನಿಮಾಗೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಸಿಕ್ಕಿದ್ದು, ಶಂಕರ್ ಗುರು ಅವರಿಗೆ ‘ಬಡವ ರಾಸ್ಕಲ್’ ಚಿತ್ರಕ್ಕಾಗಿ ‘ಅತ್ಯುತ್ತಮ ಚೊಚ್ಚಲ ನಿರ್ದೇಶನ’ ಪ್ರಶಸ್ತಿ ನೀಡಲಾಗಿದೆ. ಕೊಡವ ಭಾಷೆಯ ‘ನಾಡ ಪೆದ ಆಶಾ’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ಪ್ರಶಸ್ತಿ ಸಿಕ್ಕಿದೆ.

ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಸಹನಾ ಎಂ. ಭಾರದ್ವಾಜ್ ಅವರಿಗೆ ನೀಡಲಾಗಿದೆ. ಅನೀಶ್ ಕೇಶವ ರಾವ್ ಅವರು ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಭಜರಂಗಿ 2’ ಸಿನಿಮಾಗಾಗಿ ರವಿ ಸಂತೇಹಕ್ಲು ಅವರು ‘ಅತ್ಯುತ್ತಮ ಕಲಾ ನಿರ್ದೇಶನ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.

‘ರತ್ನನ ಪ್ರಪಂಚ’ ಚಿತ್ರಕ್ಕಾಗಿ ಪ್ರಮೋದ್‌ ಅತ್ಯುತ್ತಮ ಪೋಷಕ ನಟ ಹಾಗೂ ಉಮಾಶ್ರೀ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪತ್ರಕರ್ತ ಸದಾಶಿವ ಶೆಣೈ ಅಧ್ಯಕ್ಷತೆಯಲ್ಲಿ ಆಯ್ಕೆ ಸಲಹಾ ಸಮಿತಿ ರಚಿಸಲಾಗಿತ್ತು.

ಅತ್ಯುತ್ತಮ ಗೀತ ರಚನೆ: ನಾಗಾರ್ಜುನ ಶರ್ಮ (777 ಚಾರ್ಲಿ)

ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಶಿವಕುಮಾರ್ ಎಸ್​. (ಪೊಗರು)

ಅತ್ಯುತ್ತಮ ಸಂಕಲನ: ಪ್ರತೀಶ್ ಶೆಟ್ಟಿ (777 ಚಾರ್ಲಿ)

ಅತ್ಯುತ್ತಮ ಛಾಯಾಗ್ರಹಣ: ಭುನವೇಶ್ ಪ್ರಭು (ಆಮ್ಚಿ ಸಂಸಾರ- ಕೊಂಕಣಿ)

ಅತ್ಯುತ್ತಮ ಚಿತ್ರಕಥೆ: ರಘು ಕೆ.ಎಂ (ದೊಡ್ಡ ಹಟ್ಟಿ ಬೋರೆಗೌಡ)

ಅತ್ಯುತ್ತಮ ಕಥೆ: ಮಂಜುನಾಥ್ ಮುನಿಯಪ್ಪ (9 ಸುಳ್ಳು ಕಥೆಗಳು)

ತೀರ್ಪುಗಾರರ ವಿಶೇಷ ಪ್ರಶಸ್ತಿಗಳು:

ಅತ್ಯುತ್ತಮ ಚಿತ್ರ: ಭೈರವಿ

ಅತ್ಯುತ್ತಮ ವಸ್ತ್ರ ವಿನ್ಯಾಸ: ಯೋಗಿ ಜಿ. ರಾಜು, (ಭಜರಂಗಿ 2)

ಅತ್ಯುತ್ತಮ ಪ್ರಸಾದನ: ಶಿವಕುಮಾರ್ (ತಾಯಿ ಕಸ್ತೂರ್ ಗಾಂಧಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News