TVK ಮುಖ್ಯಸ್ಥ, ನಟ ವಿಜಯ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ
Photo : ndtv
ಚೆನ್ನೈ, ಫೆ.27: ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿರುವುದು ಬಹಿರಂಗವಾಗಿದೆ. 27 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆಯಲು ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ತಿಳಿದುಬಂದಿದೆ.
1954ರ ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 27(1)(ಎ) ಮತ್ತು 27(1)(ಡಿ) ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಪ್ರಕರಣವು ಪ್ರಸ್ತುತ ಜಿಲ್ಲಾ ನ್ಯಾಯಾಲಯದ ಮುಂದಿದ್ದು, ವಿಚಾರಣೆ ಮುಂದುವರಿದಿದೆ.
ಅರ್ಜಿಯಲ್ಲಿ 51 ವರ್ಷದ ವಿಜಯ್ ಒಬ್ಬ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು 48 ವರ್ಷದ ಸಂಗೀತಾ ಆರೋಪಿಸಿದ್ದಾರೆ. 2021ರಲ್ಲಿ ಈ ಬಗ್ಗೆ ತಿಳಿದುಕೊಂಡಿದ್ದಾಗಿ ಅವರು ದಾಖಲಿಸಿದ್ದಾರೆ.
ಸಂಬಂಧವನ್ನು ಕೊನೆಗೊಳಿಸುವುದಾಗಿ ವಿಜಯ್ ಭರವಸೆ ನೀಡಿದ್ದರೂ, ಅದು ಮುಂದುವರಿದಿದೆ ಎಂದು ಸಂಗೀತಾ ದೂರಿದ್ದಾರೆ. ವಿಜಯ್ ತಮ್ಮ ಸಾಮಾಜಿಕ ಹಾಗೂ ವೃತ್ತಿಪರ ವಲಯದಿಂದ ಸಂಗೀತಾಳನ್ನು ದೂರವಿಟ್ಟು, ವಿದೇಶ ಪ್ರವಾಸಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆ ನಟಿಯೊಂದಿಗೆ ಭಾಗವಹಿಸುತ್ತಿದ್ದರೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಆ ನಟಿ ಈ ಪ್ರವಾಸಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನಿಯಮಿತವಾಗಿ ಹಂಚಿಕೊಂಡಿದ್ದರೆಂದು, ಆದರೆ ವಿಜಯ್ ಅವುಗಳಿಗೆ ವಿರೋಧ ವ್ಯಕ್ತಪಡಿಸದೇ ಮೌನಾನುಮೋದನೆ ನೀಡಿದಂತಾಗಿದೆ ಎಂದು ಸಂಗೀತಾ ಹೇಳಿದ್ದಾರೆ. ಈ ಪೋಸ್ಟ್‌ಗಳು ತಮಗೂ ಮಕ್ಕಳಿಗೂ ಪದೇ ಪದೇ ಅವಮಾನ ಉಂಟುಮಾಡಿದವು ಎಂದು ಅವರು ದೂರಿದ್ದಾರೆ.
ಇದಲ್ಲದೆ, ವಿಜಯ್ ಹಿಂದಿನಿಂದ ಅನುಭವಿಸುತ್ತಿದ್ದ ಸೌಲಭ್ಯಗಳನ್ನು ಹಿಂತೆಗೆದುಕೊಂಡು, ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ್ದಾಗಿ ಸಂಗೀತಾ ಆರೋಪಿಸಿದ್ದಾರೆ. “ತಮ್ಮ ಮುಕ್ತ ಚಲನೆಯನ್ನು ಮೊಟಕುಗೊಳಿಸಲಾಗಿದೆ” ಎಂಬ ಅಂಶವನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
2024ರಲ್ಲಿ ವಿಜಯ್ ಅವರ ಈ ನಡವಳಿಕೆ ಹಾಗೂ ಪುನರಾವರ್ತಿತ ಸಾಮಾಜಿಕ ಮಾಧ್ಯಮ ವಿವಾದಗಳಿಂದ ತಮಗೆ ತೀವ್ರ ಮಾನಸಿಕ ಹಿಂಸೆ ಉಂಟುಮಾಡಿದವು ಎಂದು ಸಂಗೀತಾ ಹೇಳಿದ್ದಾರೆ. ಮದುವೆ ಪರಿಣಾಮಕಾರಿಯಾಗಿ ಅಸ್ತಿತ್ವದಲ್ಲಿಲ್ಲ; ಈಗ ಅದು ಕೇವಲ ಕಾಗದದ ಮೇಲಿನ ಸಂಬಂಧವಾಗಿ ಉಳಿದಿದೆ ಎಂದು ಅವರು ತಿಳಿಸಿದ್ದಾರೆ. ಸಂಬಂಧವು ಪುನರುಜ್ಜೀವನಗೊಳ್ಳಲು ಅಸಾಧ್ಯವಾಗಿದ್ದು, ತಮಗೆ “ಮಾನಸಿಕ ನೋವು, ಅವಮಾನ ಮತ್ತು ಸಂಕಟ” ಮಾತ್ರ ನೀಡುತ್ತಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಆಗಸ್ಟ್ 25, 1999ರಂದು ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿಜಯ್–ಸಂಗೀತಾ ವಿವಾಹವಾಗಿದ್ದರು. ತಮಿಳು ಕೈಗಾರಿಕೋದ್ಯಮಿಯೊಬ್ಬರ ಪುತ್ರಿಯಾಗಿರುವ ಸಂಗೀತಾ, ಮದುವೆಗೆ ಮುನ್ನ ವಿಜಯ್ ಅವರ ಅಭಿಮಾನಿಯಾಗಿದ್ದರು ಎನ್ನಲಾಗಿದೆ. ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಶಶಾ ಎಂಬ ಇಬ್ಬರು ಮಕ್ಕಳು ಇದ್ದಾರೆ.