'ದಿ ಕೇರಳ ಸ್ಟೋರಿ 2' ಚಿತ್ರ ಬಿಡುಗಡೆಯಿಲ್ಲ; ಟಿಕೆಟ್ ಹಣ ಮರುಪಾವತಿಸಲಾಗುತ್ತಿದೆ : ವಕೀಲರಿಂದ ಮಾಹಿತಿ
Photo source: YouTube/PVR
ಕೊಚ್ಚಿ: 'ದಿ ಕೇರಳ ಸ್ಟೋರಿ 2-ಗೋಸ್ ಬಿಯಾಂಡ್' ಚಿತ್ರಕ್ಕಾಗಿ ಬುಕ್ ಮಾಡಿದ ಟಿಕೆಟ್‌ಗಳ ಹಣವನ್ನು ಮರುಪಾವತಿಸಲಾಗುತ್ತಿದ್ದು, ಚಿತ್ರ ಬಿಡುಗಡೆಯಿಲ್ಲ ಎಂದು ಚಿತ್ರದ ಬಿಡುಗಡೆಯನ್ನು ವಿರೋಧಿಸಿದ ಅರ್ಜಿದಾರರ ಪರ ವಕೀಲರು ಶುಕ್ರವಾರ ತಿಳಿಸಿದ್ದಾರೆ.
ಅರ್ಜಿದಾರರಲ್ಲಿ ಒಬ್ಬರಾದ ಶ್ರೀದೇವ್ ನಂಬೂದಿರಿ ಪರ ವಕೀಲರಾದ ಮೈತ್ರೇಯಿ ಸಚ್ಚಿದಾನಂದ ಹೆಗ್ಡೆ ಈ ಕುರಿತು ಪ್ರತಿಕ್ರಿಯಿಸಿ, ಚಿತ್ರ ಬಿಡುಗಡೆಯಾಗದ ಕಾರಣ ಮತ್ತು ಟಿಕೆಟ್ ಹಣವನ್ನು ಮರುಪಾವತಿಸಲಾಗುತ್ತಿರುವುದರಿಂದ ಚಿತ್ರದ ನಿರ್ಮಾಪಕರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸುವುದಿಲ್ಲ ಎಂದು ಹೇಳಿದರು.
ಬೆಳಿಗ್ಗೆ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಮುಂದೆ ಹೆಗ್ಡೆ ಅವರು ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಿದ್ದರೂ, ಚಿತ್ರದ ಟಿಕೆಟ್ ಬುಕಿಂಗ್ ನಡೆಯುತ್ತಿದೆ ಎಂದು ಹೇಳಿದ್ದರು. ಚಿತ್ರದ ಬಿಡುಗಡೆಯ ವಿಷಯವು ವಿಭಾಗೀಯ ಪೀಠದ ಮುಂದೆ ಇದ್ದರೂ ಸಹ ಅವರು ಏಕ ನ್ಯಾಯಪೀಠದ ಮುಂದೆ ಅದನ್ನು ಪ್ರಸ್ತಾಪಿಸಿದರು. ಆ ಪೀಠವು ಗುರುವಾರ ತಡರಾತ್ರಿ ವಿಚಾರಣೆಯ ನಂತರ ಆ ಕುರಿತು ಆದೇಶವನ್ನು ಕಾಯ್ದಿರಿಸಿತು.
ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆಯೇ ಎಂದು ಪರಿಶೀಲಿಸುವುದಾಗಿಯೂ ಅವರು ನ್ಯಾಯಮೂರ್ತಿ ಥಾಮಸ್ ಅವರಿಗೆ ತಿಳಿಸಿದ್ದರು. ಬಳಿಕ, ಚಿತ್ರ ಬಿಡುಗಡೆಯಾಗಿಲ್ಲ ಮತ್ತು ಟಿಕೆಟ್ ಮೊತ್ತವನ್ನು ಮರುಪಾವತಿಸಲಾಗುತ್ತಿದೆ ಎಂದು ಹೇಳಿದ್ದಾರೆ.