×
Ad

ಸರಣಿ ಹಂತಕನ ನೆರಳ ಹಿಂದೆ..!

Update: 2026-02-21 12:14 IST

ಚಿತ್ರ: ಸೆಕೆಂಡ್ ಕೇಸ್ ಆಫ್ ಸೀತಾರಾಮ್

ನಿರ್ದೇಶನ: ದೇವಿ ಪ್ರಸಾದ್ ಶೆಟ್ಟಿ

ನಿರ್ಮಾಣ: ದೇವಿ ಪ್ರಸಾದ್ ಶೆಟ್ಟಿ ಮತ್ತು ಸಾತ್ವಿಕ್ ಹೆಬ್ಬಾರ್

ತಾರಾಗಣ: ವಿಜಯ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು.

ಸೀತಾರಾಮ್ ಬಿನೊಯ್ ಸಿನೆಮಾ ನೋಡಿದವರಿಗೆ ಸೀತಾರಾಮ್ ಯಾರೆಂದು ಚೆನ್ನಾಗಿ ಗೊತ್ತಿರುತ್ತದೆ. ಗೊತ್ತಿಲ್ಲದವರು ಕೂಡ ಅರ್ಥ ಮಾಡಿಕೊಳ್ಳುವಂಥ ಕಥೆಯನ್ನು ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಮೂಲಕ ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ.

ಅದು ಆನೆಗದ್ದೆ ಪೊಲೀಸ್ ಸ್ಟೇಷನ್. ಅಲ್ಲಿನ ಇನ್‌ಸ್ಪೆಕ್ಟರ್ ಸೀತಾರಾಮ್. ಚಾಣಾಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಾತ. ಆದರೆ ಆತನ ಚಾಣಾಕ್ಷತೆಗೆ ಸವಾಲೆಸೆಯುವಂಥ ಘಟನೆ ಅಲ್ಲಿ ಸಂಭವಿಸುತ್ತದೆ. ಒಂದರ ಹಿಂದೆ ಒಂದು ಎನ್ನುವಂತೆ ಸರಣಿ ಕೊಲೆಗಳು ನಡೆಯತೊಡಗುತ್ತವೆ. ಪತ್ತೆಯಾಗುವುದು ಎಲ್ಲವೂ ಚಿತ್ರಹಿಂಸೆಯಿಂದ ಸಾವಿಗೀಡಾದ ಮಧ್ಯವಯಸ್ಕ ಗಂಡಸರ ಮೃತದೇಹಗಳು. ಹೋಟೆಲ್ ಜಯಣ್ಣ, ಟ್ಯಾಕ್ಸಿ ಡ್ರೈವರ್ ಅಶೋಕ, ಪೊಲೀಸ್ ಅಧಿಕಾರಿ ವಸಂತ್.. ಹೀಗೆ ವಿಭಿನ್ನ ಕ್ಷೇತ್ರದ ವ್ಯಕ್ತಿಗಳ ಕೊಲೆ. ಒಂದಕ್ಕೊಂದು ಸಂಬಂಧವೇ ಇರದಂಥ ಸರಣಿ ಕೊಲೆಗಳು! ಆದರೆ ಇವುಗಳನ್ನು ಜೋಡಿಸುವಂಥ ಸರಪಣಿ ಏನು? ಅದರ ಹುಡುಕಾಟವೇ ಈ ಸೆಕೆಂಡ್ ಕೇಸ್ ಆಫ್ ಸೀತಾರಾಮ್.

ಚಿತ್ರದ ಮೊದಲಾರ್ಧದಲ್ಲೇ ಅಪರಾಧಿ ಸಿಕ್ಕೇಬಿಟ್ಟ ಎನ್ನುವ ಭಾವ ಮೂಡಿಸುವಲ್ಲಿ ನಿರ್ದೇಶಕರು ಗೆಲ್ಲುತ್ತಾರೆ. ಆದರೆ ಮಧ್ಯಂತರದ ಹೊತ್ತಿಗೆ ಹೊಸದೊಂದು ತಿರುವಿನೊಂದಿಗೆ ಬಂದು ನಿಲ್ಲುತ್ತಾರೆ. ಕ್ಲೈಮ್ಯಾಕ್ಸ್ ಹೊತ್ತಿಗೆ ಕೊಲೆಗಾರ ಯಾರೆನ್ನುವ ತಲೆನೋವು ಪ್ರೇಕ್ಷಕರನ್ನು ಕಾಡುತ್ತದೆ. ಆದರೆ ಅಂತಿಮವಾಗಿ ಎಲ್ಲದಕ್ಕೂ ಕಥೆ ಸಮರ್ಪಕ ಉತ್ತರ ನೀಡುತ್ತದೆ.

ಸರಣಿ ಕೊಲೆಗಳ ಬಗ್ಗೆ ನಡೆಯುವ ತನಿಖೆಯನ್ನು ಆಧಾರವಾಗಿಸಿ ಈಗಾಗಲೇ ಸರಣಿಯಾಗಿ ಸಿನೆಮಾಗಳು ಬರುತ್ತಿವೆ. ಅದರ ನಡುವೆ ಈ ಚಿತ್ರವನ್ನು ವಿಭಿನ್ನವಾಗಿಸಲು ಇರುವ ಏಕೈಕ ಅಂಶ ಅಂದರೆ ಅದು ಈ ನಿರ್ದೇಶಕ ಮತ್ತು ನಾಯಕ ನಟನ ನಡುವೆ ಇರುವ ಕಾಂಬಿನೇಶನ್. ಕನ್ನಡದಲ್ಲಿ ತನಿಖಾ ಚಿತ್ರಗಳ ಪಂಟರಾಗುತ್ತಿರುವವರು ದೇವಿ ಪ್ರಸಾದ್ ಶೆಟ್ಟಿ. ಇವರ ನಿರ್ದೇಶನದ ಇದುವರೆಗಿನ ಮೂರು ಚಿತ್ರಗಳು ಕೂಡ ಪೊಲೀಸ್ ತನಿಖೆಯದ್ದೇ ಆಗಿದ್ದು ವಿಜಯರಾಘವೇಂದ್ರ ಅವರೇ ಪ್ರಧಾನ ಪಾತ್ರ ನಿಭಾಯಿಸಿದ್ದಾರೆ. ಚಿನ್ನಾರಿ ಮುತ್ತನಿಗೆ ಹೊಸ ಇಮೇಜ್ ತಂದುಕೊಟ್ಟಿರುವ ಈ ನಿರ್ದೇಶಕರ ಗರಡಿಯಲ್ಲಿ ಚಿತ್ರದಿಂದ ಚಿತ್ರಕ್ಕೆ ರಾಘು ಹೊಸ ಹೊಳಪಿನಲ್ಲಿ ಗೋಚರಿಸುತ್ತಿದ್ದಾರೆ.

ಸೀತಾರಾಮ್ ಪಾತ್ರದಲ್ಲಿ ವಿಜಯ ರಾಘವೇಂದ್ರ ಮತ್ತೊಮ್ಮೆ ನೈಜ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶಾಲಾಶಿಕ್ಷಕ ಸೆಬಾಸ್ಟಿಯನ್ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅಭಿನಯಿಸಿದ್ದಾರೆ. ಮಾನಸಿಕ ಅಸ್ವಸ್ಥತೆಯನ್ನು ಅದ್ಭುತವಾಗಿ ತೋರಿಸಿಕೊಟ್ಟಿದ್ದಾರೆ. ನಾಯಕನ ಅಕ್ಕನ ಪಾತ್ರವನ್ನು ಉಷಾ ಭಂಡಾರಿ ನಿರ್ವಹಿಸಿದ್ದಾರೆ. ಭಾವನ ಪಾತ್ರಧಾರಿಯ ನಟನೆಯೂ ಗಮನ ಸೆಳೆಯುತ್ತದೆ.

ನಟನೆಯ ವಿಚಾರದಲ್ಲಿ ಎಲ್ಲವನ್ನು ನೈಜವೆನಿಸುವಂತೆ ತೋರಿಸಿರುವುದೇನೋ ನಿಜ. ಆದರೆ ನಿರ್ದೇಶಕರು ಸರಣಿ ಕೊಲೆಯಂಥ ಗಂಭೀರ ಪ್ರಕರಣದ ತನಿಖೆಯನ್ನು ಒಂದು ಪೊಲೀಸ್ ಸ್ಟೇಷನ್ ಒಳಗೆ ಸೀಮಿತಗೊಳಿಸಿರುವುದು ವಾಸ್ತವಕ್ಕೆ ದೂರವೆನಿಸುತ್ತದೆ. ಅದರಲ್ಲೂ ಪೊಲೀಸ್ ಅಧಿಕಾರಿಯ ಕೊಲೆ ನಡೆದಾಗಲಾದರೂ ಪ್ರಕರಣದ ಪರಿಣಾಮ ಪೊಲೀಸ್ ವಲಯದ ಆಚೆ ಹೇಗಿದೆ ಎನ್ನುವ ಕುತೂಹಲ ಮೂಡುವುದು ಸಹಜ. ಆದರೆ ಅದಕ್ಕೆ ಇಲ್ಲಿ ಯಾವುದೇ ಉತ್ತರವಿಲ್ಲ.

ಚಿತ್ರದ ಕಥೆಯಲ್ಲಿ ಸಂಗೀತಕ್ಕೆ ಒಂದು ಪ್ರಧಾನ ಪಾತ್ರವಿದೆ. ಅದೇ ಎಳೆಯೊಂದಿಗೆ ಚಿತ್ರವನ್ನು ಇನ್ನಷ್ಟು ಮ್ಯೂಸಿಕಲ್ ಮಾಡಬಹುದಿತ್ತು ಅನಿಸದಿರದು. ಆದರೆ ಸಂಗೀತ ನಿರ್ದೇಶಕ ನವನೀತ ಶ್ಯಾಮ್ ಸಿಕ್ಕ ಅವಕಾಶವನ್ನೇ ಚೆನ್ನಾಗಿ ಬಳಸಿದ್ದಾರೆ. ಹಿನ್ನೆಲೆ ಸಂಗೀತದಲ್ಲಿ ವೀಣೆ ಮತ್ತು ವಯೊಲಿನ್ ಬಳಕೆ ಮನ ಸೆಳೆಯುತ್ತದೆ.

ಖುದ್ದು ವಿಜಯ ರಾಘವೇಂದ್ರ ಕಂಠದಲ್ಲಿರುವ ‘ಉರುಳೋ ಕಾಲವೇ..’ ಎನ್ನುವ ತ್ರಿಲೋಕ್ ತ್ರಿವಿಕ್ರಮ ರಚನೆ ಅರ್ಥಪೂರ್ಣ, ಭಾವಪೂರ್ಣ ಎನಿಸುತ್ತದೆ. ಭವಾನಿ ಶಂಕರ್ ಆನೆಕಲ್ಲು ಸಂಭಾಷಣೆ ಸಂದರ್ಭಕ್ಕೆ ಹೊಂದುವಂತಿದೆ. ಹೇಮಂತ್ ಆಚಾರ್ಯ ಛಾಯಾಗ್ರಹಣದಲ್ಲಿ ಪ್ರತೀ ಫ್ರೇಮ್‌ಗಳು ಮಾತನಾಡುತ್ತವೆ. ಈ ಚಿತ್ರದಲ್ಲಿನ ತನಿಖಾಧಿಕಾರಿಯ ಸಹನೆ ನಿಮಗೂ ಇದ್ದರೆ ಖಂಡಿತವಾಗಿ ಚಿತ್ರವನ್ನು ಅನುಭವಿಸಿ ಆಸ್ವಾದಿಸಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಶಿಕರ ಪಾತೂರು

contributor

Similar News