ʼಡಬಲ್ ಲುಕ್ ನಲ್ಲಿ ಯಶ್ʼ: 'ಟಾಕ್ಸಿಕ್' ಚಿತ್ರದ ಮತ್ತೊಂದು ಟೀಸರ್ ಬಿಡುಗಡೆ
Photo: X/@TheNameIsYash
ಹಿಂಸೆಯ ವಿಜೃಂಭಣೆ ನಡುವೆ ಯಶ್ ಅವರ ಡಬಲ್ ಲುಕ್ ರಿಲೀಸ್ ಮಾಡಿದ ಚಿತ್ರತಂಡ
‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆಯಾದ ಕೆಲವೇ ಕ್ಷಣದಲ್ಲಿ ವೈರಲ್ ಆಗಿದೆ. 15 ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ. ಈ ಬಾರಿಯ ಟೀಸರ್ ನಲ್ಲಿ ಯಶ್ ಅವರ ಎರಡು ಲುಕ್ ಬಹಿರಂಗವಾಗಿದೆ. ಯಶ್ ಯಂಗ್ ಲುಕ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಹೀಗಾಗಿ ರಾಯ ಮತ್ತು ರಾಯನ ಮಗ ಎರಡು ಪಾತ್ರದಲ್ಲಿ ಯಶ್ ನಟಿಸಿರುವ ಸಾಧ್ಯತೆಯ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
It’s Gonna Get Crazyyyy !!!#ToxicTeaser Out now!
— Yash (@TheNameIsYash) February 20, 2026
Kannada - https://t.co/UTLyUWmDVn
Hindi - https://t.co/XDSCoKkM8N
Telugu - https://t.co/T5O6bZlVDv
Tamil - https://t.co/2791WiqPGd
Malayalam - https://t.co/CM9pkqutTU#Toxic In Cinemas Worldwide from 19-03-2026#ToxicTheMovie… pic.twitter.com/iOiOLNv2bW
ಈ ಬಾರಿಯ ಟೀಸರ್ ನಲ್ಲಿ ಸಂಭಾಷಣೆಯೂ ಇದೆ. ‘ಈ ಸಲ ಯುದ್ಧನೇ ಬೇರೆ, ಅವರ ಕುತಂತ್ರನೇ ಬೇರೆ, ಎಲ್ಲರನ್ನೂ ಎದುರು ಹಾಕಿಕೊಂಡು ಬದುಕೋಕೆ ಆಗಲ್ಲ ರಾಯ. ಹಠ ಬಿಟ್ಬಿಡು, ಇಟ್ಸ್ ಓವರ್’ ಎಂದು ವ್ಯಕ್ತಿಯೋರ್ವನ ಧ್ವನಿ ಬರುತ್ತದೆ. ಅದಕ್ಕೆ ಉತ್ತರವಾಗಿ, “ನಾನು ಹೇಳಿದ್ರೆ ಮಾತ್ರ ಅದು ಓವರ್, ಇಲ್ಲದಿದ್ರೆ ಅಲ್ಲ’ ಎಂದು ರಾಯ ಹೇಳುತ್ತಾನೆ. ಉಳಿದಂತೆ ಟೀಸರ್ ನಲ್ಲಿ ಹಿಂಸೆಯೇ ವಿಜೃಂಭಿಸಿದೆ.
‘ಟಾಕ್ಸಿಕ್’ ಸಿನಿಮಾ 2026 ಮಾರ್ಚ್ 19ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಾಲಿವುಡ್ ಸೂಪರ್ ಸ್ಟಾರ್ ರಣವೀರ್ ಸಿಂಗ್ ಅವರ ಬಹುನಿರೀಕ್ಷಿತ ‘ಧುರಂಧರ್’ ಸೀಕ್ವೆಲ್ನೊಂದಿಗೆ ಸಿನಿಮಾ ಪೈಪೋಟಿ ನಡೆಸಲಿದೆ. ಹೀಗಾಗಿ ಈ ಬಾರಿಯ ಟೀಸರ್ ನ ಸಂಭಾಷಣೆಗಳು ‘ಧುರಂಧರ್-2’ ವಿರುದ್ಧ ಹೇಳಿರಬಹುದು ಎಂದೂ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇದಕ್ಕೂ ಮೊದಲು, 2026ರ ಜನವರಿ 8ರಂದು ಯಶ್ ಅವರ 40ನೇ ಹುಟ್ಟುಹಬ್ಬದಂದು, ಚಿತ್ರತಂಡ ನಾಯಕನ ನಟನನ್ನು ರಾಯ ಎಂದು ಪರಿಚಯಿಸುವ ಪಾತ್ರದ ಟೀಸರ್ ಬಿಡುಗಡೆ ಮಾಡಿತ್ತು. ಟೀಸರ್‌ನಲ್ಲಿ, ಯಶ್ ಸ್ಮಶಾನದಲ್ಲಿ ಗನ್ ಹಿಡಿದು ನಿರ್ಭಯವಾಗಿ ನಡೆಯುತ್ತಿರುವುದನ್ನು ತೋರಿಸಲಾಗಿತ್ತು. ಗುಂಡೇಟಿನ ಸದ್ದುಗಳು ಪ್ರತಿಧ್ವನಿಸುತ್ತಿತ್ತು. ಆ ವಿಡಿಯೋ ಕೂಡ ಭಾರಿ ಸಂಚಲನ ಸೃಷ್ಟಿಸಿತ್ತು. ಅದಾಗ್ಯೂ, ಕೆಲವು ದೃಶ್ಯಗಳು ಆಕ್ಷೇಪಾರ್ಹವೆಂದು ಭಾವಿಸಿದ ಕೆಲ ಗುಂಪುಗಳು ದೂರುಗಳನ್ನು ಸಲ್ಲಿಸಿದ್ದು, ಚಿತ್ರ ವಿವಾದವನ್ನೂ ಎದುರಿಸಿದೆ.
ಗೀತು ಮೋಹನ್‌ದಾಸ್ ಮತ್ತು ಯಶ್ ಸೇರಿ ಬರೆದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ್ ಮತ್ತು ಯಶ್ ನಿರ್ಮಿಸಿರುವ ಬಿಗ್ ಬಜೆಟ್ ಸಿನಿಮಾ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಣಗೊಂಡಿದ್ದು, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.