‘ಟಾಕ್ಸಿಕ್’ ಬಿಡುಗಡೆ ದಿನಾಂಕವನ್ನು ಮುಂದೂಡಿದ ಚಿತ್ರತಂಡ; ಕಾರಣವೇನು ಗೊತ್ತೇ?
ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನಪ್ಸ್ 2026 ಜೂನ್ 4ರಂದು ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಿರುವ ಬಗ್ಗೆ ಚಿತ್ರತಂಡ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಸೋಮವಾರವಷ್ಟೇ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿ ಅಭಿಮಾನಿಗಳಿಂದ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದ್ದು, ಚಿತ್ರದ ಕುರಿತ ನಿರೀಕ್ಷೆ ಬೆಟ್ಟದಷ್ಟು ಏರಿತ್ತು. ಆದರೆ ಇದೀಗ ಬುಧವಾರ ಮಾರ್ಚ್ 04ರಂದು ಚಿತ್ರತಂಡ ಸಿನಿಪ್ರೇಮಿಗಳ ಆಘಾತಕಾರಿ ಸುದ್ದಿಯನ್ನು ನೀಡಿದೆ.
Toxic : A Fairy Tale for Grown-Ups - in Cinemas Worldwide on 4 June 2026 pic.twitter.com/TlLgyzrKsF
— Yash (@TheNameIsYash) March 4, 2026
‘ಟಾಕ್ಸಿಕ್’ ಸಿನಿಮಾ 2026 ಮಾರ್ಚ್ 19ರ ಬದಲಿಗೆ 2026 ಜೂನ್ 4ರಂದು ಬಿಡುಗಡೆಯಾಗಲಿರುವ ಸುದ್ದಿಯನ್ನು ನಟ ಯಶ್ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದಾರೆ.
“ನಾವು ಸಿನಿಮಾವನ್ನು ಜಾಗತಿಕ ಸಿನಿ ಪ್ರೇಮಿಗಳಿಗೆ ನೀಡುವ ಉದ್ದೇಶದಿಂದ ನಿರ್ಮಿಸಿದ್ದೇವೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಚಿತ್ರೀಕರಣವಾದ ಸಿನಿಮಾವನ್ನು ತವರು ಮತ್ತು ವಿದೇಶಿ ನೆಲಗಳೆರಡರಲ್ಲೂ ಜೊತೆಯಾಗಿ ಬಿಡುಗಡೆ ಮಾಡುವ ಉದ್ದೇಶವನ್ನು ಹೊಂದಿದ್ದೆವು. ವರ್ಷಗಳ ಕಾಲ ಬಹಳ ಬದ್ಧತೆಯಿಂದ ನಿರ್ದೇಶಿಸಿದ ಸಿನಿಮಾವನ್ನು ಮಾರ್ಚ್ 19ರಂದು ನಿಮ್ಮ ಮುಂದಿಡುವ ಉದ್ದೇಶ ಹೊಂದಿದ್ದೆವು. ಆದರೆ ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ ಅನಿಶ್ಚಿತ ಪರಿಸ್ಥಿತಿಯಲ್ಲಿ ಗಮನದಲ್ಲಿರಿಸಿ ನೋಡಿದಾಗ ವ್ಯಾಪಕ ಪ್ರೇಕ್ಷಕರನ್ನು ತಲುಪುವ ನಮ್ಮ ಉದ್ದೇಶಕ್ಕೆ ಹೊಡೆತ ಬಿದ್ದಿದೆ” ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
ಮುಂದುವರಿದು, “ನಮ್ಮ ವಿದೇಶಿ ಪಾಲುದಾರರು ಮತ್ತು ವಿದೇಶಿ ಸಿನಿ ಪ್ರೇಕ್ಷಕರನ್ನು ಗಮನದಲ್ಲಿರಿಸಿ ನಾವು ಬಹಳ ಕಠಿಣ ಆದರೆ ಜಾಗರೂಕವಾಗಿ ಪರಿಗಣಿಸಿದ ನಂತರ ನಮ್ಮ ಬಿಡುಗಡೆಯ ವೇಳಾಪಟ್ಟಿಯನ್ನು ಬದಲಿಸಲು ನಿರ್ಧರಿಸಿದ್ದೇವೆ. ನಿಮ್ಮ ಸಹನೆ ಮತ್ತು ನಿರೀಕ್ಷೆಗಾಗಿ ನಾವು ಧನ್ಯವಾದ ಅರ್ಪಿಸುತ್ತೇವೆ. ಮುಂದೆಯೂ ಇದೇ ರೀತಿ ಪ್ರೀತಿ ಮತ್ತು ಬೆಂಬಲವನ್ನು ನೀಡುತ್ತೀರಿ ಎನ್ನುವ ಭರವಸೆಯ್ಲಲಿದ್ದೇವೆ. ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನಪ್ಸ್ 2026 ಜೂನ್ 4ರಂದು ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ” ಎಂದು ಪೋಸ್ಟ್ನಲ್ಲಿ ವಿವರ ನೀಡಲಾಗಿದೆ.
ಟಾಕ್ಸಿಕ್ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗುತ್ತಿದ್ದಲ್ಲಿ, ರಣ್ವೀರ್ ಸಿಂಗ್ ಅವರ ಬಾಲಿವುಡ್ ಚಿತ್ರ ‘ಧುರಂಧರ್ -2’ ಜೊತೆಗೆ ನೇರ ಸ್ಪರ್ಧೆ ಎದುರಿಸುತ್ತಿತ್ತು. ಗಲ್ಫ್ ರಾಷ್ಟ್ರಗಳಲ್ಲಿ ‘ಧುರಂಧರ್ 2’ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ, ಈ ರಾಷ್ಟ್ರವನ್ನು ದೊಡ್ಡ ಮಾರುಕಟ್ಟೆ ಮಾಡಿಕೊಳ್ಳಬೇಕು ಎಂಬುದು ‘ಟಾಕ್ಸಿಕ್’ ಸಿನಿಮಾ ತಂಡದ ಯೋಜನೆಯಾಗಿತ್ತು. ಆದರೆ, ಇದೀಗ ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಹರಡಿರುವುದರಿಂದ ಯೋಜಿಸಿದ ರೀತಿಯಲ್ಲಿ ಬಿಡುಗಡೆ ಸಾಧ್ಯವಾಗುತ್ತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ತಂಡ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದೆ.