×
Ad

ಕ್ಷೌರಿಕರ ಶೋಕ ವಿನಾಶಕ ಅಶೋಕ!

Update: 2026-02-28 13:58 IST

ಕ್ಷೌರದ ವಿಚಾರದಲ್ಲಿ ನಡೆಯುವ ದೌರ್ಜನ್ಯದಿಂದ ಇಂದಿಗೂ ನಮ್ಮ ಸಮಾಜ ಪೂರ್ಣವಾಗಿ ಮುಕ್ತಿ ಹೊಂದಿಲ್ಲ. ಅಲ್ಲೊಂದು ಇಲ್ಲೊಂದು ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ಅದರಲ್ಲೂ ಕ್ಷೌರವನ್ನು ತುಚ್ಛವಾಗಿ ಕಾಣುವಂಥ ಬೈಗುಳಗಳು ಈಗಲೂ ಚಾಲ್ತಿಯಲ್ಲಿವೆ. ಪರಿಸ್ಥಿತಿ ಈಗಲೇ ಹೀಗಿದ್ದರೆ ೭೦ರ ದಶಕದಲ್ಲಿ ಕ್ಷೌರಿಕರ ಸ್ಥಿತಿ ಹೇಗಿರಬಹುದು? ಅವರ ಮೇಲೆ ನಡೆದಿರಬಹುದಾದ ದೌರ್ಜನ್ಯ ಯಾವ ಮಟ್ಟದ್ದು ಎನ್ನುವುದನ್ನು ಈ ಚಿತ್ರ ತೋರಿಸಿ ಕೊಟ್ಟಿದೆ.

ಇದು ಕರ್ನಾಟಕದ ಒಂದು ಹಳ್ಳಿಯಲ್ಲಿ ನಡೆಯುವ ಕಥೆ. ಜಾತಿಭೇದದ ಆಚರಣೆ ದೊಡ್ಡ ಮಟ್ಟದಲ್ಲೇ ಇರುವಂಥ ಕುಗ್ರಾಮ. ಕ್ಷೌರವನ್ನು ಕುಲ ಕಸುಬಾಗಿಸಿಕೊಂಡವರಿಗೆ ಊರ ಹೊರಗೊಂದು ಕೇರಿ ಮಾಡಲಾಗಿರುತ್ತದೆ. ಅಂಚೆಯ ವ್ಯಕ್ತಿ ಕೂಡ ಆ ಕೇರಿಗೆ ಹೋಗಿ ಪತ್ರ ನೀಡುವಂತಿಲ್ಲ. ಕೊಟ್ಟರೆ ಆತನಿಗೂ ಮೇಲ್ವರ್ಗದ ಮಂದಿ ಬಹಿಷ್ಕಾರ ಹಾಕುತ್ತಾರೆ. ಇಂಥ ಊರಿನಲ್ಲಿ ವರ್ಷಗಳಿಂದ ಕೂದಲು ಕ್ಷೌರದ ಒಟ್ಟು ಮಾರುಕಟ್ಟೆಯನ್ನು ಟೆಂಡರ್ ಮೂಲಕ ತಮ್ಮದಾಗಿಸಿಕೊಂಡವನು ಕುಟ್ಟಿ ಬಾಬ್ಜಿ.

ವೀರಪ್ಪನ್ ಹಾಗೆ ಮೀಸೆ ಬಿಟ್ಟಿರುವ ಕುಟ್ಟಿ ಬಾಬ್ಜಿ ಕ್ರೌರ್ಯದಲ್ಲಿಯೂ ಆತನಂತೆ ನಿರ್ದಯಿ. ತನ್ನ ವಿರುದ್ಧದ ಸಣ್ಣದೊಂದು ಅಲುಗಾಟಕ್ಕೂ ಬಾಬ್ಜಿಯ ತೀರ್ಪು ಕೊಲೆಯೇ! ತಮಿಳು ಮಿಶ್ರಿತ ಕನ್ನಡ ಮಾತನಾಡುವ ಆತ ಆರು ದಶಕದ ಹಿಂದೆಯೇ ಆ ಹಳ್ಳಿಗೆ ವಲಸೆ ಬಂದು ಬೀಡು ಬಿಟ್ಟಿರುವುದಾಗಿ ಹೇಳುತ್ತಾನೆ. ಆತನ ಕೈಕೆಳಗೆ ಜೀತದಾಳುಗಳಂತೆ ದುಡಿಯುವವರು ಅಲ್ಲಿನ ಕ್ಷೌರಿಕರು. ಅವರಲ್ಲಿ ಗಂಗಾಧರ ಎನ್ನುವಾತನೂ ಒಬ್ಬ. ತನ್ನ ಪುತ್ರನಿಗೆ ವಿದ್ಯಾಭ್ಯಾಸ ಕೊಡಿಸಿ ಹೇಗಾದರೂ ಸರಕಾರಿ ಅಧಿಕಾರಿ ಮಾಡಬೇಕು ಎನ್ನುವುದು ಗಂಗಾಧರನ ಕನಸು. ಆ ಕನಸು ನನಸು ಮಾಡಲು ಮನಸಿಟ್ಟು ಕಲಿಯುವ ಸುಪುತ್ರನೇ ಅಶೋಕ. ಆದರೆ ಕಲಿತು ಪಾಸಾಗಿ ನೌಕರಿಯ ನೇಮಕಾತಿ ಪತ್ರ ಕೈ ಸೇರುವ ಹೊತ್ತಿಗೆ ಅಶೋಕ ಮನಸ್ಸು ಬದಲಾಯಿಸಿರುತ್ತಾನೆ. ಅದಕ್ಕೆ ಕಾರಣವಾಗುವ ಅಂಶಗಳೇನು? ಅಶೋಕನ ಮುಂದಿನ ನಡೆಯೇನು ಎನ್ನುವುದನ್ನು ಪರದೆಯ ಮೇಲೆ ನೋಡಿದರೆ ಚೆನ್ನ.

ಎಪ್ಪತ್ತರ ದಶಕದ ವಿದ್ಯಾರ್ಥಿಯಾಗಿ, ಅಶೋಕ ಎನ್ನುವ ಯುವಕನಾಗಿ ನೀನಾಸಂ ಸತೀಶ್ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಅವರಿಗೆ ನೀಡಿರುವಂಥ ವಸ್ತ್ರ ವಿನ್ಯಾಸ, ಪ್ರಸಾದನ, ಕಲಾ ನಿರ್ದೇಶನ ಎಲ್ಲವೂ ಪೂರಕವಾಗಿ ಕೆಲಸ ಮಾಡಿವೆ. ಅಶೋಕನಾಗಿ ಕಿಚ್ಚು ಮೂಡಿಸಿಕೊಂಡ ಹದಿಹರೆಯದ ಯುವಕನಂತೆ ಸಂಭಾಷಣೆಗಳನ್ನು ಹೇಳಿದ್ದಾರೆ. ಆದರೆ ಹೊಡೆದಾಟಗಳು ಸಾಮಾನ್ಯ ಕಮರ್ಷಿಯಲ್ ಸಿನೆಮಾಗಳಂತೆ ಅತಿಮಾನುಷಿಕವಾಗಿಯೇ ಇವೆ. ಸಮುದಾಯದ ಮೇಲಿನ ದೌರ್ಜನ್ಯ ಆ ಪಾತ್ರವನ್ನು ಕೆರಳಿಸಿರುತ್ತದೆ. ಹಾಗಾಗಿ ಸತೀಶ್ ಅಲ್ಲಲ್ಲಿ ಕಣ್ಣರಳಿಸಿ, ಹೊರಳಿಸಿ ಬೆದರಿಸಿದ್ದಾರೆ.

ಅಶೋಕನ ತಂದೆ ಗಂಗಾಧರನ ಪಾತ್ರಕ್ಕೆ ಬಿ.ಸುರೇಶ್ ಜೀವ ನೀಡಿದ್ದಾರೆ. ಮಮತೆಯ ತಂದೆಯಾಗಿ ಭಾವ ನೀಡಿದ್ದಾರೆ. ದೌರ್ಜನ್ಯಕ್ಕೊಳಗಾಗುವ ದೃಶ್ಯಗಳಲ್ಲಿ ದೇಹವನ್ನೇ ನೀಡಿ ಕೌಪೀನದಲ್ಲಿ ಕಾಣಿಸಿದ್ದಾರೆ. ಕುಟ್ಟಿ ಬಾಬ್ಜಿ ಪಾತ್ರದಲ್ಲಿ ಸಂಪತ್ ಮೈತ್ರೇಯ ಅವಿಸ್ಮರಣೀಯ ಅಭಿನಯ ನೀಡಿದ್ದಾರೆ. ತಮ್ಮ ಸಾಧಾರಣ ದೇಹಾಕೃತಿ ಇಟ್ಟುಕೊಂಡೇ ಬೃಹದಾಕಾರದ ಭಯ ಬಿತ್ತುತ್ತಾರೆ. ಆರಂಭದಿಂದ ಕೊನೆಯ ತನಕ ಗೊಗ್ಗರು ಧ್ವನಿಯಲ್ಲೇ ಮಾತನಾಡಿ ಪಾತ್ರದ ಮೇಲಿನ ತಮ್ಮ ಸಮರ್ಪಣಾ ಭಾವ ಪ್ರದರ್ಶಿಸಿದ್ದಾರೆ.

ಬಾಬ್ಜಿಯ ಪುತ್ರನಾಗಿ ಯಶ್ ಶೆಟ್ಟಿ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿದ್ದಾರೆ. ಆದರೆ ನೋಟದಲ್ಲೇ ಕ್ರೂರಿಯಂತೆ ಕಂಡರೂ ಇವರ ಕ್ರೌರ್ಯಕ್ಕೆ ಹೆಚ್ಚು ಅವಕಾಶಗಳಿಲ್ಲ. ಅಶೋಕನ ಸ್ನೇಹಿತನಾಗಿ ನಟಿಸಿರುವ ಗೋಪಾಲಕೃಷ್ಣ ದೇಶಪಾಂಡೆ ಕೆಲವೇ ದೃಶ್ಯಗಳಲ್ಲಿ ಬಂದರೂ ಎಂದಿನಂತೆ ಪೂರ್ತಿ ಅಂಕ ಗಳಿಸಿಯೇ ತೆರಳುತ್ತಾರೆ. ನಟ ಪಿ. ರವಿಶಂಕರ್ ವಿಶೇಷ ಪಾತ್ರದಲ್ಲಿ ವಿರಾಜಮಾನರಾಗಿ ವಿಸ್ಮಯ ತರಿಸುತ್ತಾರೆ.

ದೃಶ್ಯಗಳಲ್ಲಿ ಲವಲವಿಕೆ ಉಳಿಸಿಕೊಳ್ಳುವ ಲವಿತ್ ಛಾಯಾಗ್ರಹಣ ಮತ್ತು ಪೂರ್ಣಚಂದ್ರ ತೇಜಸ್ವಿ ಸಂಗೀತದ ಸಮ್ಮಿಲನವಾದಾಗ ಸೃಜನಶೀಲತೆ ಸಂಪೂರ್ಣ. ಆದರೆ ಕಥೆಯ ಒಟ್ಟು ಸಂದೇಶದ ಬಗ್ಗೆ ಇದೇ ಮಾತು ಹೇಳಲಾಗದು. ದಮನಿತರ ಪರ ಎನ್ನುವ ರೀತಿಯಲ್ಲಿ ಇತ್ತೀಚೆಗೆ ತೆರೆಕಾಣುತ್ತಿರುವ ಎಲ್ಲ ಚಿತ್ರಗಳಲ್ಲೂ ಈ ಕೊರತೆ ಇದೆ. ಇತಿಹಾಸದ ಕ್ರಾಂತಿಯಲ್ಲಿ ದಮನಿತರ ರಕ್ತ ಚಿಮ್ಮಿದೆ ನಿಜ. ಆದರೆ ಕೊನೆಯಲ್ಲಿ ಕಾನೂನು ಕೈಗೆತ್ತಿಕೊಳ್ಳುವುದೇ ಕ್ರಾಂತಿಯ ಗೆಲುವೇ? ನಡೆದಂಥ ಘಟನೆಗಳೇ ಇದ್ದರೂ ಅವುಗಳಿಂದ ನಮಗೆ ಮಾಹಿತಿ ಮತ್ತು ಸ್ಫೂರ್ತಿಯಾಗಬೇಕಾದ ವಿಚಾರಗಳಷ್ಟೇ ಸಂದೇಶವಾಗಿರಲಿ ಎನ್ನುವುದು ಸದಾಶಯ.

ಚಿತ್ರ: ದಿ ರೈಸ್ ಆಫ್ ಅಶೋಕ

ನಿರ್ದೇಶಕ: ವಿನೋದ್ ದೋಂಡಾಳೆ

ನಿರ್ಮಾಪಕ: ವರ್ಧನ್ ಹರಿ

ತಾರಾಗಣ: ನೀನಾಸಂ ಸತೀಶ್, ಸಂಪತ್ ಮೈತ್ರೇಯ ಮೊದಲಾದವರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - -ಶಶಿಕರ ಪಾತೂರು

contributor

Similar News