×
Ad

ಖ್ಯಾತ ನಟ ಜೂನಿಯರ್ ಮೆಹ್ಮೂದ್ ನಿಧನ

Update: 2023-12-08 13:02 IST

ಜೂನಿಯರ್ ಮೆಹ್ಮೂದ್ (Photo: X/@_SanjayGupta)

ಮುಂಬೈ: ಉದರ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜೂನಿಯರ್ ಮೆಹ್ಮೂದ್ ಎಂದೇ ಪ್ರಖ್ಯಾತರಾಗಿದ್ದ ನಯೀಮ್ ಸಯ್ಯದ್ ಇಂದು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಈ ಸುದ್ದಿಯನ್ನು ಅವರ ಕುಟುಂಬದ ಸದಸ್ಯರು ಪ್ರಕಟಣೆಯೊಂದರಲ್ಲಿ ದೃಢಪಡಿಸಿದ್ದಾರೆ.

“ಜೂನಿಯರ್ ಮೆಹ್ಮೂದ್ ಇಂದು ಮುಂಜಾನೆ 2.15ರ ವೇಳೆಗೆ ತಮ್ಮ ನಿವಾಸದಲ್ಲಿ ನಿಧನರಾದರು. ಅವರು ಉದರ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ” ಎಂದು ಕುಟುಂಬದ ಸದಸ್ಯರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ಕುರಿತು indianexpress.comಗೆ ಪ್ರತಿಕ್ರಿಯಿಸಿರುವ ಜೂನಿಯರ್ ಮೆಹ್ಮೂದ್ ಅವರ ಪುತ್ರ ಹುಸ್ನೈನ್, “ಅವರಿಗೆ ನಾಲ್ಕನೆ ಹಂತದ ಉದರ ಕ್ಯಾನ್ಸರ್ ಇರುವುದು 18 ದಿನಗಳ ಹಿಂದಷ್ಟೆ ತಿಳಿದು ಬಂದಿತು. ನಾವು ಅವರನ್ನು ಟಾಟಾ ಸ್ಮಾರಕ ಆಸ್ಪತ್ರೆಗೆ ದಾಖಲಿಸಿದೆವು. ಈ ಹಂತದಲ್ಲಿ ಅವರಿಗೆ ಚಿಕಿತ್ಸೆ ಹಾಗೂ ಕೀಮೋಥೆರಪಿ ನೀಡುವುದು ತುಂಬಾ ನೋವಿನಿಂದ ಕೂಡಿರುತ್ತದೆ. ಹೀಗಾಗಿ ಅವರನ್ನು ಮನೆಯಲ್ಲೇ ಆರೈಕೆ ಮಾಡಿ ಎಂದು ಆಸ್ಪತ್ರೆಯ ಡೀನ್ ನಮಗೆ ಸೂಚಿಸಿದರು” ಎಂದು ಹೇಳಿದ್ದಾರೆ.

ಮಗುವಾಗಿದ್ದಾಗಲೇ ತಮ್ಮ ಸಿನಿಮಾ ಪಯಣವನ್ನು ಆರಂಭಿಸಿದ್ದ ಜೂನಿಯರ್ ಮೆಹಮೂದ್, ‘ಮೊಹಬ್ಬತ್ ಝಿಂದಗಿ ಹೈ’ (1966) ಚಿತ್ರದ ಮೂಲಕ ನಟನಾಗಿ ಬಣ್ಣ ಹಚ್ಚಿದರು. ಇದಾದ ನಂತರ ನೌನಿಹಾಲ್, ಕ್ಯಾರವಾನ್, ಹಾಥಿ ಮೇರೆ ಸಾಥಿ, ಮೇರೆ ನಾಮ್ ಜೋಕರ್, ಸುಹಾಗ್ ರಾತ್, ಬ್ರಹ್ಮಚಾರಿ, ಕಟಿ ಪತಂಗ್, ಹರೇ ರಾಮ ಹರೇ ಕೃಷ್ಣ, ಗೀತ್ ಗಾತಾ ಚಲ್, ಇಮಾಂದಾರ್, ಬಾಪ್ ನಂಬರಿ ಬೇಟಾ ದಸ್ ನಂಬರಿ, ಆಜ್ ಕಾ ಅರ್ಜುನ್, ಗುರುದೇವ್, ಛೋಟೆ ಸರ್ಕಾರ್ ಹಾಗೂ ಜದಾಯಿಯಂಥ ಪ್ರಮುಖ ಚಿತ್ರಗಳನ್ನು ನಟಿಸಿದ್ದರು. ಇದಾದ ನಂತರ ದೂರದರ್ಶನ ಧಾರಾವಾಹಿಗಳಲ್ಲೂ ಅವರು ನಟಿಸಿದರು. ‘ಪ್ಯಾರ್ ಕಾ ದರ್ದ್ ಹೈ ಮೀಠಾ ಮೀಠಾ ಪ್ಯಾರಾ ಪ್ಯಾರಾ’ ಹಾಗೂ ‘ಏಕ್ ರಿಷ್ತಾ ಸಾಝೇದಾರಿ ಕಾ’ ಅವರು ನಟಿಸಿದ ಪ್ರಮುಖ ಧಾರಾವಾಹಿಗಳು. ಇದರೊಂದಿಗೆ ಮರಾಠಿ ಚಿತ್ರರಂಗದಲ್ಲಿ ನಿರ್ಮಾಣ ಹಾಗೂ ನಿರ್ದೇಶಕರಾಗಿಯೂ ಜೂನಿಯರ್ ಮೆಹ್ಮೂದ್ ದುಡಿದರು.

ಇಂದು (ಶುಕ್ರವಾರ) ಅವರ ಅಂತ್ಯಕ್ರಿಯೆಯು ಸಾಂತಾಕ್ರೂಝ್ ನ ಸ್ಮಶಾನದಲ್ಲಿ ನಡೆಯಲಿದೆ. ಜೂನಿಯರ್ ಮೆಹ್ಮೂದ್ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News