×
Ad

ಅದೇ ಮಚ್ಚು, ಅದೇ ಸ್ಕೆಚ್ಚು ಮತ್ತು ರೌಡಿಸಂ ಎನ್ನುವ ಹುಚ್ಚು!

Update: 2026-03-07 14:46 IST

ಚಿತ್ರ: ಮೆಜೆಸ್ಟಿಕ್ 2

ನಿರ್ದೇಶನ: ರಾಮು

ನಿರ್ಮಾಣ: ಎಚ್. ಆನಂದಪ್ಪ

ತಾರಾಗಣ: ಭರತ್ ಕುಮಾರ್,

ಸಂಹಿತಾ ವಿನ್ಯಾ,

ಶ್ರುತಿ ಮೊದಲಾದವರು.

ಮೆಜೆಸ್ಟಿಕ್ ಎನ್ನುವ ಹೆಸರು ಕನ್ನಡ ಸಿನೆಮಾ ಪ್ರಿಯರಲ್ಲಿ ಸಂಚಲನ ಮೂಡಿಸಿತ್ತು. ಅದಕ್ಕೆ ಆ ಚಿತ್ರಕ್ಕೆ ಸಿಕ್ಕಂಥ ಭರ್ಜರಿ ಯಶಸ್ಸು ಕಾರಣ. ಆದರೆ ಅಂಥದೊಂದು ಚಿತ್ರದ ರೌಡಿಸಂ ಅಂಶವನ್ನು ಮಾತ್ರ ಇಟ್ಟುಕೊಂಡು ಮಾಡಿರುವ ಚಿತ್ರ ‘ಮೆಜೆಸ್ಟಿಕ್ 2’. ಉಳಿದಂತೆ ಅದಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ.

ಕಥೆಯಲ್ಲಿ ನಾಯಕನ ಹೆಸರು ದಾಸ. ಆದರೆ ಜನ ಗುರುತಿಸುವುದು ಮರಿದಾಸ ಎಂದೇ. ಮೊದಲ ದೃಶ್ಯದಲ್ಲೇ ಬೆಂಗಳೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗುತ್ತಾನೆ. ಬಿಡುಗಡೆಯಾಗುತ್ತಲೇ ನೇರವಾಗಿ ರೌಡಿಗಳ ಅಡ್ಡಕ್ಕೆ ಹೋಗಿ ಹಲ್ಲೆ ನಡೆಸುತ್ತಾನೆ. ಆಮೇಲೆ ಮರಿದಾಸನ ಫ್ಲ್ಯಾಶ್ ಬ್ಯಾಕ್ ಬಿಚ್ಚಿಕೊಳ್ಳುತ್ತದೆ. ಆತ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡವನು. ತಾಯಿಯ ಸಂಪಾದನೆಗೆ ಸಹಾಯವಾಗಲೆಂದು ಚಹಾ ಮಾರಾಟಕ್ಕಿಳಿದವನು. ಆದರೆ ಪ್ರೇಯಸಿಯನ್ನು ಕೆಣಕಿದ ರೌಡಿಗೆ ಉತ್ತರ ನೀಡಿ ಜೈಲು ಸೇರಿದವನು. ಸೆರೆಯಿಂದ ಬಂದವನ ಬದುಕು ಹೇಗಿರುತ್ತದೆ ಎನ್ನುವುದೇ ಈ ಕಥೆಯ ಸಾರ.

ರೌಡಿಸಂ ಕಥೆ ಎಂದೊಡನೆ ಇದೊಂದು ಎಳೆ ಇಟ್ಟುಕೊಂಡೇ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ಅವುಗಳಲ್ಲಿ ಕೆಲವಷ್ಟೇ ಗೆದ್ದು ಬೀಗಿವೆ. ಅದರಲ್ಲಿ ಮೆಜೆಸ್ಟಿಕ್ ಕೂಡ ಒಂದು. ಆದರೆ ಅಲ್ಲಿನಂತೆ ಇಲ್ಲಿ ಕಥೆಯೊಳಗೆ ತಿರುವುಗಳಿಲ್ಲ. ಎಲ್ಲವೂ ನೇರಾ ನೇರ. ನವ ನಾಯಕನಾಗಿ ಭರತ್ ಕುಮಾರ್ ಭರವಸೆಯ ನಟನೆ ನೀಡಿದ್ದಾರೆ. ಕಾಲೇಜ್ ಹುಡುಗ ಮತ್ತು ಯುವ ರೌಡಿ ಎನ್ನುವ ಎರಡೂ ನೋಟಗಳಿಗೆ ಹೊಂದುವಂತೆ ನಟಿಸಿದ್ದಾರೆ. ಭರತ್‌ಗೆ ನಾಯಕಿಯಾಗಿ ಪ್ರೀತಿ ಎನ್ನುವ ಪಾತ್ರದಲ್ಲಿ ಸಂಹಿತಾ ವಿನ್ಯಾ ಕಾಣಿಸಿದ್ದಾರೆ. ಪ್ರೀತಿಗೆ ಅಂಥ ಪ್ರಾಮುಖ್ಯತೆ ಇಲ್ಲವಾದರೂ ಕೊನೆಯ ದೃಶ್ಯದಲ್ಲೊಂದು ತಿರುವು ನಿರೀಕ್ಷಿಸಬಹುದಾಗಿದೆ.

ದಾಸನ ತಾಯಿಯಾಗಿ ಶ್ರುತಿ ಎಂದಿನಂತೆ ತಮ್ಮ ನಟನೆಯಿಂದ ಪಾತ್ರಕ್ಕೆ ಘನತೆ ತಂದುಕೊಟ್ಟಿದ್ದಾರೆ. ರೋಗಿ ತಂದೆಯಾಗಿ ರವಿಭಟ್ ಇದ್ದಾರೆ. ಶ್ರುತಿ ಸಹೋದರನಾಗಿ ಶಿವಕುಮಾರ್ ಆರಾಧ್ಯ ಅಭಿನಯಿಸಿದ್ದಾರೆ. ನಿರ್ದೇಶಕ ರಾಮು ಅವರಿಗೆ ಇದು ಮೊದಲ ಚಿತ್ರ. ಆದರೆ ಚಿತ್ರರಂಗದಲ್ಲಿನ ತನ್ನ ಅನುಭವ ಮತ್ತು ಅನುಭವಿ ತಂಡದ ಮೂಲಕ ದೃಶ್ಯಗಳಲ್ಲಿ ವೃತ್ತಿಪರತೆ ಕಾಯ್ದುಕೊಂಡಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣ, ಚಿನ್ನಯ್ಯ ಸಾಹಸ ನಿರ್ದೇಶನ ಕೂಡ ಚಿತ್ರಕ್ಕೆ ಬೆನ್ನೆಲುಬಾಗಿದೆ. ‘‘ಲಾಂಗ್ ಹಿಡಿದು ಲೈಫ್ ಶಾರ್ಟ್ ಮಾಡ್ಕೋಬೇಡ’’ ಎನ್ನುವಂಥ ಒಂದಷ್ಟು ಮನ ಸೆಳೆಯುವ ಸಂಭಾಷಣೆಗಳು ವಿಜಯ ಕುಮಾರ್ ರಚನೆಯಲ್ಲಿ ಮೂಡಿ ಬಂದಿವೆ.

ರೌಡಿ ಬಂಗಾರಿಯ ಕೈಕೆಳಗಿನ ರೌಡಿಗಳಾಗಿ ಕೋಟೆ ಪ್ರಭಾಕರ್ ಮತ್ತು ಪೆಟ್ರೋಲ್ ಪ್ರಸನ್ನ ನಟಿಸಿದ್ದಾರೆ. ಬಂಗಾರಿ ಪಾತ್ರಧಾರಿಗಿಂತ ಹೆಚ್ಚು ಭಯಪಡಿಸುವ ಕ್ರೌರ್ಯವನ್ನು ಪ್ರಸನ್ನ ಪ್ರದರ್ಶಿಸಿದ್ದಾರೆ. ವಿನುಮನಸು ಸಂಗೀತದಲ್ಲಿ ಎಲ್ಲ ಹಾಡುಗಳು ಸುಮಧುರವಾಗಿವೆ. ಆದರೆ ಫ್ಲ್ಯಾಶ್ ಬ್ಯಾಕ್ ಸಂದರ್ಭದಲ್ಲಿ ಬರುವ ಪ್ರೇಮಗೀತೆಯಲ್ಲಿ ನಾಯಕ ಆನಂತರದ ಬದಲಾದ ಗೆಟಪ್‌ನಲ್ಲಿ ಕಾಣಿಸುತ್ತಾನೆ. ಇಂಥ ಕೆಲವು ಕಂಟಿನ್ಯುಟಿ ಮಿಸ್ಟೇಕ್ಸ್ ಚಿತ್ರದಲ್ಲಿವೆ.

ನಾಯಕನ ಇಂಟ್ರೊಡಕ್ಷನ್ ಹಾಡಿನ ಕೆಲವು ದೃಶ್ಯಗಳಲ್ಲಿ ಮಾಲಾಶ್ರೀ ಕಾಣಿಸುತ್ತಾರೆ. ಇಂದಿಗೂ ತಮ್ಮ ಆ್ಯಕ್ಷನ್ ಇಮೇಜ್ ಉಳಿದಿರುವುದನ್ನು ತೋರಿಸಿದ್ದಾರೆ. ಅವರ ಕಾಲದ್ದೇ ಆ್ಯಕ್ಷನ್ ಚಿತ್ರಗಳ ಶೈಲಿಯನ್ನು ಬದಲಿಸಲಾಗಿಲ್ಲ ಎಂದು ‘ಮೆಜೆಸ್ಟಿಕ್ 2’ ಕೂಡ ಸಾಬೀತು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಶಿಕರ ಪಾತೂರು

contributor

Similar News