×
Ad

ಕರಾವಳಿ ಎಂಬ ಮರ್ಲೂರಿನ ‘ಸು ಫ್ರಂ ಸೋ’: ಇದು ನಗುವ ವಿಷಯವಲ್ಲ !

Update: 2025-07-28 11:53 IST

ರಾಜ್ ಬಿ. ಶೆಟ್ಟಿ ನಟನೆ ಮತ್ತು ನಿರ್ಮಾಣದ ಸು ಫ್ರಂ ಸೋ ಸಿನೆಮಾ ‘ಹಾಸ್ಯಭರಿತ ಚಿತ್ರ’ ಎಂದು ಸದ್ದು ಮಾಡುತ್ತಿದೆ. ಸಿನೆಮಾ ನೋಡಿದ ಎಲ್ಲರೂ ‘ಹೊಟ್ಟೆ ಹುಣ್ಣಾಗುವಷ್ಟು ನಗಾಡಿದೆ’ ಎಂದು ವಿಮರ್ಶಿಸುತ್ತಿದ್ದಾರೆ. ತುಳು ಸಂಭಾಷಣಾ ಶೈಲಿಯ ಕನ್ನಡ ಪ್ರಯೋಗ ಇರುವುದರಿಂದ ಕರಾವಳಿಯವರಂತೂ ಸು ಫ್ರಂ ಸೋ ಸಿನೆಮಾದ ಹಾಸ್ಯವನ್ನು ಸಖತ್ ಇಷ್ಟಪಟ್ಟಿದ್ದಾರೆ. ವಾಸ್ತವವಾಗಿ ಸು ಫ್ರಂ ಸೋ ಸಿನೆಮಾವು ಬುದ್ಧಿವಂತರ ಜಿಲ್ಲೆ ಎಂದು ಹೆಸರು ಪಡೆದ ಕರಾವಳಿಗರ ಬದುಕಿಗೆ ಕನ್ನಡಿ ಹಿಡಿದಿದೆ. ಕರಾವಳಿಗರಲ್ಲಿ ಸಮೂಹ ಸನ್ನಿಯಂತಿರುವ ಮೂರ್ಖತನಗಳು, ಮೌಢ್ಯವನ್ನು ಈ ಸಿನೆಮಾ ಹಾಸ್ಯದ ಮೂಲಕ ತೋರಿಸುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕರಾವಳಿಗರ ಮೌಢ್ಯದ ಹುಚ್ಚುತನವನ್ನು ಸು ಫ್ರಂ ಸೋ ಸಿನೆಮಾ ಸಾರಿ ಹೇಳುತ್ತದೆ. ಇಡೀ ಸಿನೆಮಾದ ಕತೆ ನಡೆಯುವುದೇ ‘ಮರ್ಲೂರು’ ಎಂಬ ಹಳ್ಳಿಯಲ್ಲಿ. ಮರ್ಲೂರು ಎಂದರೆ ಹುಚ್ಚರ ಊರು ಎಂದರ್ಥ !

‘ಸು ಫ್ರಂ ಸೋ ಸಿನೆಮಾದಲ್ಲಿ ಕತೆಯೇ ಇಲ್ಲ, ಸುಮ್ಮನೆ ನಗಿಸುವುದು, ಅಂತಹ ಜೋಕ್ ಕೂಡಾ ಏನೂ ಇಲ್ಲ’ ಎಂದು ಹೇಳುವವರು ಕರಾವಳಿಯಲ್ಲಿ ನಡೆಯುವ ಅಷ್ಟಮಂಗಲ ಪ್ರಶ್ನೆ, ತಾಂಬೂಲ ಪ್ರಶ್ನೆ, ಪ್ರೇತ ಬಿಡಿಸುವುದು, ಪ್ರೇತಗಳ ಮದುವೆಯಂತಹ ಮೌಢ್ಯಗಳನ್ನು ತಿಳಿದಿರಬೇಕು. ಕರಾವಳಿಯ ಪ್ರತೀ ಮನೆ-ಮನಗಳಲ್ಲೂ ಹಾಸು ಹೊಕ್ಕಾಗಿರುವ ಇಂತಹ ಮೌಢ್ಯವನ್ನು ರಾಜ್ ಬಿ. ಶೆಟ್ಟಿಯವರು ನಟನೆ, ನಿರ್ಮಾಣದ ಮೂಲಕ ಸು ಫ್ರಂ ಸೋ ಸಿನೆಮಾದಲ್ಲಿ ಹಾಸ್ಯಭರಿತವಾಗಿ ಹೇಳಿದ್ದಾರೆ.

ಪೊದುವಾಳರು, ಮಂತ್ರವಾದಿಗಳು, ಅರ್ಚಕರೇ ತುಂಬಿ ಹೋಗಿದ್ದ ಕೇರಳದಲ್ಲಿ ಪ್ರೇತ, ಭೂತ ಕಾಟವೆಂದು ನಂಬುವ ಜನರೇ ತುಂಬಿದ್ದರು. ಈ ರೀತಿಯ ಮೌಢ್ಯಗಳಿಂದ ಕೂಡಿದ ಸಮಾಜ ಅಸಮಾನತೆ, ಅಸ್ಪಶ್ಯತೆ, ತಾರತಮ್ಯಗಳನ್ನು ಸೃಷ್ಟಿಸುತ್ತದೆ. ಕೇರಳದ ಜಾತಿಯ ಭೀಕರತೆ ಮತ್ತು ಮಾನವೀಯತೆಯ ಕೊರತೆಯನ್ನು ಕಂಡೇ ಇದೊಂದು ‘ಹುಚ್ಚರ ನಾಡು’ ಎಂದು ಸ್ವಾಮಿ ವಿವೇಕಾನಂದರು ಕರೆದಿದ್ದರು. ಸಮಾಜ ಸುಧಾರಕ ನಾರಾಯಣ ಗುರುಗಳ ಚಳವಳಿಯಿಂದ ಕೇರಳವು ‘ಹುಚ್ಚುತನದಿಂದ ಮುಕ್ತಿ’ ಪಡೆದಿತ್ತು. ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಇಡೀ ದೇಶದಲ್ಲಿ ಅಸಮಾನತೆಯನ್ನು ತಕ್ಕ ಮಟ್ಟಿಗೆ ಕಡಿಮೆಗೊಳಿಸಿದ ರಾಜ್ಯ ಯಾವುದಾದರೂ ಇದ್ದರೆ ಅದು ಕೇರಳ !.

ಕೇರಳದ ಉತ್ತರ ಭಾಗ ಒಂದು ಕಾಲದಲ್ಲಿ ಕರ್ನಾಟಕದ ದಕ್ಷಿಣ ಕರಾವಳಿಯ ಭಾಗವಾಗಿತ್ತು. ಹಾಗಾಗಿ ಕೇರಳದ ಪೊದುವಾಳರು, ಮಂತ್ರವಾದಿಗಳ ಮೌಢ್ಯ ಕರ್ನಾಟಕದ ಕರಾವಳಿಯ ಭಾಗದಲ್ಲೂ ಹಾಸು ಹೊಕ್ಕಾಗಿತ್ತು. ನಾರಾಯಣ ಗುರುಗಳ ಸಾಮಾಜಿಕ ಚಳವಳಿ, ಟಿಪ್ಪು ಸುಲ್ತಾನರ ಕಾನೂನುಗಳಿಂದ ಕೇರಳವು ಅಮಾನವೀಯ ಮೌಢ್ಯಗಳಿಂದ ಹೊರ ಬಂತು. ಆದರೆ ಕರ್ನಾಟಕದ ದಕ್ಷಿಣ ಕರಾವಳಿಯು ಕೇರಳದ ಉತ್ತರ ಕರಾವಳಿಯಿಂದ ರಾಜಕೀಯ ಸಂಪರ್ಕ ಕಡಿತವಾಯಿತೇ ಹೊರತು ಮೌಢ್ಯಗಳು ದುಪ್ಪಟ್ಟಾಯಿತು. ಈಗೀಗ ಕರಾವಳಿಯಲ್ಲಿನ ಪೊದುವಾಳರು, ಮಂತ್ರವಾದಿಗಳ ಮೌಢ್ಯಕ್ಕೆ ರಾಜಕೀಯ ಸ್ವರೂಪ ಸಿಕ್ಕಿದೆ. ಹಿಂದೂ ಧರ್ಮದೊಳಗಿನ ಅಸಮಾನತೆ, ಅಸ್ಪಶ್ಯತೆಯನ್ನು ಪ್ರತಿಪಾದಿಸುತ್ತಿದ್ದ ಮೌಢ್ಯ ‘ಪ್ರಶ್ನೆ’ಗಳು ಈಗ ಕೋಮುವಾದವನ್ನೂ ಪ್ರತಿನಿಧಿಸುತ್ತದೆ. ಹಾಗಾಗಿ ಕರಾವಳಿಯ ಹಿಂದೂ ಧರ್ಮದೊಳಗಿನ ಮೌಢ್ಯವನ್ನು ತೊಡೆದು ಹಾಕುವುದೂ ಒಂದು ಪ್ರಮುಖವಾದ ಹೆಜ್ಜೆಯಾಗುತ್ತದೆ.

ಬುದ್ಧಿವಂತರ ಜಿಲ್ಲೆ ಎಂದು ಸ್ವಯಂ ಘೋಷಿಸಿಕೊಂಡ ಕರಾವಳಿಯಲ್ಲಿ ಮೌಢ್ಯದ ಪ್ರಮಾಣ ಹೇಗಿದೆ ಎಂದು ನೋಡಲು 2015 ಜುಲೈ ನಲ್ಲಿ ಕುಂದಾಪುರದಲ್ಲಿ ನಡೆದ ಘಟನೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಕುಂದಾಪುರ ತಾಲೂಕಿನ ವಂಡ್ಸೆಯ ಮನೆಯೊಂದರ ತೆಂಗಿನ ತೋಟದಲ್ಲಿ ಮಗು ನಗುವ ಧ್ವನಿ ಕೇಳುತ್ತಿತ್ತು. ಇಡೀ ತೋಟ ಹುಡುಕಿದರೂ ಮಗು ಕಾಣುತ್ತಿಲ್ಲ. ನಗು ಕೇಳಿಸುತ್ತಿದೆ. ಅಂತಿಮವಾಗಿ ಮನೆ ಮಂದಿ ಮತ್ತು ಊರವರು ಜೋತಿಷಿಗಳ ಬಳಿ ಹೋದರು. ನಿಮ್ಮ ಕುಟುಂಬದಲ್ಲಿ ಈ ಹಿಂದೆ ಯಾವುದಾದರೂ ಮಗು ಸತ್ತಿದೆಯೇ ಎಂದು ಜೋತಿಷಿಗಳು ಪ್ರಶ್ನಿಸಿದರು. ದೂರದ ಸಂಬಂಧದಲ್ಲಿ ಹಲವು ವರ್ಷಗಳ ಹಿಂದೆ ಮಗು ಸತ್ತಿರುವ ಬಗ್ಗೆ ಚರ್ಚೆಯಾಯಿತು. ಜೋತಿಷಿ ಹೇಳುವುದಕ್ಕೂ, ತೋಟದಲ್ಲಿ ಮಗು ನಗುವ ಕಾಟಕ್ಕೂ ತಾಳೆಯಾಯಿತು. ಮಂತ್ರ, ತಂತ್ರ, ತಾಯತ, ಪೂಜೆ ಎಂದು ಜೋತಿಷಿಗಳು ಸಾವಿರಾರು ರೂಪಾಯಿ ಕಿತ್ತುಕೊಂಡರು. ವಾಸ್ತವವಾಗಿ ಕುಂದಾಪುರದ ವಂಡ್ಸೆಯ ಆ ತೋಟಕ್ಕೆ ಕಾಯಿ ಕೀಳಲು ಬರುವ ಕಾರ್ಮಿಕ ಕಾಯಿ ಕೀಳುತ್ತಾ, ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿಟ್ಟಿದ್ದ ಮೊಬೈಲ್ ಅನ್ನು ಮರದ ಮೇಲೆಯೇ ಬಿಟ್ಟು ಬಂದಿದ್ದ. ಮೊಬೈಲ್ ಕಳೆದು ಹೋಗಿದ್ದರೂ ಎಲ್ಲಿ ಬಿಟ್ಟು ಬಂದೆ ಎಂದು ನೆನಪಿಲ್ಲದ ಆ ಕಾರ್ಮಿಕ, ತಾನು ಕಾಯಿ ಕೀಳಲು ಹೋದ ಮನೆಗೆಲ್ಲಾ ಹೋಗಿ ಮರುದಿನ ಬೆಳಗ್ಗೆ ವಂಡ್ಸೆಯ ತೋಟದ ಮನೆಗೆ ಬಂದು, ಮೊಬೈಲ್‌ಗೆ ರಿಂಗ್ ಕೊಟ್ಟ. ಮಗುವಿನ ನಗುವಿನ ರಿಂಗ್ ಟೋನ್ ಇದ್ದ ಮೊಬೈಲ್ ತೆಂಗಿನ ಮರದ ಮೇಲಿತ್ತು. ಇಡೀ ಕುಂದಾಪುರವನ್ನು ಬೆಚ್ಚಿ ಬೀಳಿಸಿದ ಮಗುವಿನ ಪ್ರೇತಕ್ಕೆ ಹೀಗೆ ಮುಕ್ತಿ ಸಿಕ್ಕಿತ್ತು. ಕಣ್ಣೆದುರೇ ಇಂತಹ ನೂರಾರು ಉದಾಹರಣೆಗಳಿದ್ದರೂ ಬುದ್ಧಿವಂತರ ಜಿಲ್ಲೆಯ ಜನ ಮೂರ್ಖರಾಗುವುದು ತಪ್ಪಿಲ್ಲ. ಅದು ಅಷ್ಟಮಂಗಲ ಪ್ರಶ್ನೆ, ತಾಂಬೂಲ ಪ್ರಶ್ನೆಗಳ ಮೂಲಕ ಜೀವಂತವಾಗಿದೆ.

90 ರ ದಶಕದ ಕರಾವಳಿಯಲ್ಲಿ ಕೋಮುಗಲಭೆಗಳ ಮೂಲಕ ಜನರನ್ನು ವಿಂಗಡಿಸಿದ್ದು ಒಂದೆಡೆಯಾದರೆ, ಬಲಪಂಥೀಯತೆಯು ಗುಪ್ತಗಾಮಿನಿಯಾಗಿ ಆಚರಣೆಗಳು, ನಂಬಿಕೆಗಳಲ್ಲಿ ಸೇರಿಕೊಂಡು ಗಟ್ಟಿಯಾಯಿತು. ಹಿಂದೂ ಮತ್ತು ಕ್ರಿಶ್ಚಿಯನ್ನರು ಹರಕೆ ಹೊತ್ತುಕೊಳ್ಳುವ ಚರ್ಚ್ ನ ಗುಡ್ಡದಲ್ಲಿ ಅಜನೆ(ಗೆಜ್ಜೆ ಸದ್ದು) ಕೇಳುತ್ತಿದೆ ಎಂದು ಸುದ್ದಿ ಹಬ್ಬಿಸಿ, ಆ ಬಳಿಕ ಕೇರಳದಿಂದ ಪೊದುವಾಳರನ್ನು ಕರೆಸಿ, ಚರ್ಚ್ ಜಾಗದಲ್ಲಿ ಕಲ್ಲುರ್ಟಿ ದೈವಸ್ಥಾನವಿದೆ ಎಂದು ಜನರನ್ನು ನಂಬಿಸಿ ಸಮುದಾಯಗಳ ಮಧ್ಯೆ ಅಪನಂಬಿಕೆ ಮೂಡಿಸಿದ ಘಟನೆಗಳು ನಮ್ಮ ಕಣ್ಣ ಮುಂದಿವೆ. 90 ರ ದಶಕದಲ್ಲಿ ಮಾಟ ಮಂತ್ರ ಬಿಡಿಸುತ್ತಿದ್ದ, ಮನುಷ್ಯನೊಳಗೆ ಸೇರಿಕೊಂಡ ಪ್ರೇತ ಬಿಡಿಸುತ್ತಿದ್ದ ಗುರುಪುರ, ಬಂಟ್ವಾಳ, ಕಾರಿಂಜೆಯ ನಕಲಿ ಮಂತ್ರವಾದಿಗಳು 2000 ನೇ ಇಸವಿಯಲ್ಲಿ ಪ್ರಖರ ಹಿಂದುತ್ವವಾದಿ ಸ್ವಾಮೀಜಿಗಳಾದರು. ಗುರುಪುರ ಭಾಗದಲ್ಲಿ ಮಾಟ ಮಂತ್ರ ಮಾಡುತ್ತಿದ್ದ ವ್ಯಕ್ತಿಯಂತೂ ಈಗ ಇಡೀ ಕರ್ನಾಟಕದ ಕೋಮು ರಾಜಕಾರಣವನ್ನು ನಿರ್ಧರಿಸುವಷ್ಟು ಹಿಂದುತ್ವವಾದಿ ಪ್ರಮುಖರಾಗಿ ಬೆಳೆದಿದ್ದಾರೆ.

ಪ್ರೇತ ಬಿಡಿಸುವ, ಅಷ್ಟಮಂಗಲ ಪ್ರಶ್ನೆ ಇಡುವ ತಂತ್ರಿಗಳು ಅದೇ ಪ್ರಖ್ಯಾತಿಯನ್ನು ಬಳಸಿಕೊಂಡು ‘ಭಾಷಣಕಾರ ತಂತ್ರಿ’ ಎಂದು ಕರೆಸಿಕೊಂಡರು. ಕಾಸರಗೋಡು ಭಾಗದ ಇಂತಹ ಭಾಷಣಕಾರ ತಂತ್ರಿಯೊಬ್ಬ ಕರಾವಳಿಯಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳಿಗೆ ಲೆಕ್ಕವಿಲ್ಲ ! ಪೊದುವಾಳರ ಮೂಲಕ ಊರಿಗೆ ಅಡರಿದ ದೋಷವನ್ನು ಕಳೆಯಲು ನಡೆಸಿದ ಬ್ರಹ್ಮಕಲಶೋತ್ಸವಗಳು, ನಾಗಮಂಡಲಗಳು ಹಿಂದುತ್ವ ಸಂಘಟನೆಗಳಿಗೆ ಸ್ವಯಂ ಸೇವಕರನ್ನು ಒದಗಿಸುವ ಫ್ಯಾಕ್ಟರಿಗಳಾಗಿ ಮಾಡಿದ ಹಾನಿ ಅಗಣಿತವಾದುದು. ಈ ರೀತಿ ಅಜನೆ(ಗೆಜ್ಜೆ ಸದ್ದು), ಅಷ್ಟಮಂಗಲ ಪ್ರಶ್ನೆ, ಮಾಟ, ಮಂತ್ರ, ಪ್ರೇತ ಬಿಡಿಸುವ ಕೇಂದ್ರಗಳೇ ಕರಾವಳಿಯಲ್ಲಿ ಕೋಮುವಾದವನ್ನು ಗಟ್ಟಿಗೊಳಿಸಿದ್ದರ ಬಗ್ಗೆ ಪ್ರತ್ಯೇಕ ಅಧ್ಯಯನ ನಡೆಯಬೇಕು.

‘ಸು ಫ್ರಮ್ ಸೋ’ ಅಂದರೆ ‘ಸುಲೋಚನಾ ಫ್ರಮ್ ಸೋಮೇಶ್ವರ’ ಸಂಪೂರ್ಣ ಹಾಸ್ಯದೊಂದಿಗೆ ತುಸು ಹಾರರ್ ಇರುವ ಮನರಂಜನೆಯ ಸಿನೆಮಾ ಎಂದು ಸರಳವಾಗಿ ಹೇಳಿ ಮುಗಿಸಬಹುದು. ಸಿನೆಮಾದ ಕತೆಯಲ್ಲಿ ಮರ್ಲರ ಊರು (ಹುಚ್ಚರ ಊರು) ‘ಮರ್ಲೂರು’ ಕರಾವಳಿಯ ಒಂದು ಹಳ್ಳಿ. ಆ ಊರಿನಲ್ಲಿ ಮೇಸ್ತ್ರಿಯಾಗಿರುವ ರವಿಯಣ್ಣ (ಶನೀಲ್ ಗೌತಮ್), ಪೇಂಟರ್ ಆಗಿ ಕೆಲಸ ಮಾಡುತ್ತಿರುವ ಅಶೋಕ ( ನಿರ್ದೇಶಕ ಜೆ.ಪಿ.ತೂಮಿನಾಡು), ‘ಭಾವ’ನಾಗಿ ಪುಷ್ಪರಾಜ್ ಬೋಳಾರ್, ‘ಚಂದ್ರ’ನಾಗಿ ಪ್ರಕಾಶ್ ತೂಮಿನಾಡು, ‘ಸತೀಶ’ನಾಗಿ ದೀಪಕ್ ರೈ ಪಾಣಾಜೆ, ‘ಯದು’ವಾಗಿ ಮೈಮ್ ರಾಮದಾಸ್, ಅಮೋಘವಾಗಿ ನಟಿಸಿರುವ ನಟಿ ಸಂದ್ಯಾ ಅವರುಗಳು ಪ್ರೇತದ ಕತೆಯನ್ನು ಹೇಳುತ್ತಾರೆ. ಪ್ರೇತ ಬಿಡಿಸಲು ಬರುವ ಕುರುಣಾಕರ ಗುರೂಜಿಯಾಗಿ ನಟಿಸಿರುವ ರಾಜ್ ಬಿ. ಶೆಟ್ಟಿಯವರು ತಮ್ಮ ನಟನಾ ಶೈಲಿಯಿಂದ ಚಿಕ್ಕಮಗಳೂರು ಭಾಗದಲ್ಲಿ ಸಕ್ರಿಯರಾಗಿದ್ದುಕೊಂಡು ಆಗಾಗ ಕರಾವಳಿಗೆ ಬರುತ್ತಿರುವ ಅವಧೂತರನ್ನು ನೆನಪಿಸುತ್ತಾರೆ.

ಪ್ರೇಕ್ಷಕರನ್ನು ನಗಿಸುವುದೊಂದೇ ಸು ಫ್ರಂ ಸೋ ಕೆಲಸವಲ್ಲ. ಕರಾವಳಿ ಎಂಬ ಹುಚ್ಚರ ಊರಿನಲ್ಲಿ (ಮರ್ಲೂರು) ಸಂಸ್ಕೃತಿ, ಆಚರಣೆ, ನಂಬಿಕೆಗಳ ಹೆಸರಿನಲ್ಲಿ ನಡೆಯುತ್ತಿರುವ ಮೌಢ್ಯದ ರಾಜಕಾರಣದ ಮೊದಲ ಹಂತವನ್ನು ಬಹಳ ಸೂಕ್ಷ್ಮವಾಗಿ ಸು ಫ್ರಂ ಸೋ ಬಯಲು ಮಾಡುತ್ತದೆ. ಅದರ ಭಾಗವಾಗಿಯೇ ಬ್ರಹ್ಮಕಲಶೋತ್ಸವ, ಕಂಬಳ ಮತ್ತು ಗುರೂಜಿಯ ಬ್ಯಾನರ್ ಗಳು ಚಿತ್ರದಲ್ಲಿ ಅಸ್ಪಷ್ಟವಾಗಿ ಕಾಣುತ್ತದೆ. ಕರಾವಳಿಯ ಪ್ರಕೃತಿ ಸೌಂದರ್ಯ, ಸಂಸ್ಕೃತಿ, ನಂಬಿಕೆ, ಆಚರಣೆಗಳೊಂದಿಗೆ ಲವ್ ಸ್ಟೋರಿಯನ್ನೂ ಜೋಡಿಸಿ, ಪಾತ್ರಗಳನ್ನು ಕೂಡಿಸಿ ಹಾಸ್ಯ ಸಂಭಾಷಣೆಯೊಂದಿಗೆ ವೈದಿಕರು, ಮಂತ್ರವಾದಿಗಳ ಜನ್ಮ ಜಾಲಾಡುವ ಕೆಲಸವನ್ನು ಬಹಳ ನವಿರಾಗಿ ಸು ಫ್ರಂ ಸೋ ಸಿನೆಮಾ ಮಾಡುತ್ತದೆ. ಆ ಕಾರಣಕ್ಕೆ ಸು ಫ್ರಂ ಸೋ ಸಿನೆಮಾವನ್ನು ಬೆಂಬಲಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನವೀನ್ ಸೂರಿಂಜೆ

contributor

Similar News