×
Ad

ರಜಿನಿಕಾಂತ್‌ ಸಂಘಿ ಅಲ್ಲ, ಅವರು ಸಂಘಿ ಆಗಿದ್ದರೆ ʼಲಾಲ್‌ ಸಲಾಂʼ ಸಿನಿಮಾ ಮಾಡುತ್ತಿರಲಿಲ್ಲ: ಪುತ್ರಿ ಐಶ್ವರ್ಯ

Update: 2024-01-27 15:14 IST

Photo source: instagram.com

ಚೆನ್ನೈ: “ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ರಜಿನಿಕಾಂತ್‌ ಅವರು ಸಂಘಿ ಅಲ್ಲ. ಅವರು ಹಾಗಾಗಿದ್ದರೆ ಅವರು “ಲಾಲ್‌ ಸಲಾಂ”ನಂತಹ ಸಿನಿಮಾ ಮಾಡುತ್ತಿರಲಿಲ್ಲ,” ಎಂದು ಸೂಪರ್‌ಸ್ಟಾರ್‌ ರಜಿನಿಕಾಂತ್‌ ಅವರ ಪುತ್ರಿ ಐಶ್ವರ್ಯ ಹೇಳಿದ್ದಾರೆ.

ಚೆನ್ನೈನಲ್ಲಿ ಜನವರಿ 26ರಂದು ರಜಿನಿಕಾಂತ್‌ ಅಭಿನಯದ ಕ್ರೀಡಾ ಕೇಂದ್ರಿತ ಸಿನಿಮಾ “ಲಾಲ್‌ ಸಲಾಂ” ನ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಸಿನಿಮಾ ಫೆಬ್ರವರಿ 9ರಂದು ಬಿಡುಗಡೆಗೊಳ್ಳಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಂದೆಗೆ “ಸಂಘಿ” ಎಂಬ ಹಣೆಪಟ್ಟಿ ಕಟ್ಟಲಾಗುತ್ತಿರುವ ಕುರಿತು ಅವರು ಮಾತನಾಡುತ್ತಿದ್ದರು. ವೇದಿಕೆಯಲ್ಲಿ ನಿಂತು ತಮ್ಮ ಬಗ್ಗೆ ಹಾಗೂ ಸಿನೆಮಾದ ಬಗ್ಗೆ ಐಶ್ವರ್ಯ ಮಾತನಾಡುತ್ತಿದ್ದಾಗ ರಜಿನಿಕಾಂತ್‌ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು ಎಂದು indiatoday.in ವರದಿ ಮಾಡಿದೆ.

“ನಾನು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುತ್ತೇನೆ. ಆದರೆ ಏನು ನಡೆಯುತ್ತಿದೆ ಎಂದು ನನ್ನ ತಂಡ ನನಗೆ ತಿಳಿಸುತ್ತದೆ ಹಾಗೂ ಕೆಲ ಪೋಸ್ಟ್‌ಗಳನ್ನು ತೋರಿಸುತ್ತದೆ. ಅವುಗಳನ್ನು ನೋಡಿದಾಗ ನನಗೆ ಸಿಟ್ಟು ಬಂದಿತ್ತು. ನಾವು ಕೂಡ ಮನುಷ್ಯರೇ. ಇತ್ತೀಚೆಗೆ ಹಲವು ಜನರು ತಂದೆಯನ್ನು ಸಂಘಿ ಎಂದು ಕರೆದಿದ್ದಾರೆ. ನನಗೆ ಅದರ ಅರ್ಥ ಗೊತ್ತಿರಲಿಲ್ಲ. ಅದರ ಅರ್ಥವನ್ನು ಒಬ್ಬರ ಬಳಿ ಕೇಳಿದಾಗ ಒಂದು ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸುವವರಿಗೆ ಹಾಗೆನ್ನುತ್ತಾರೆ ಎಂದು ತಿಳಿಯಿತು,” ಎಂದು ಐಶ್ವರ್ಯ ಹೇಳಿ ರಜನೀಕಾಂತ್‌ ಸಂಘಿ ಆಗಿದ್ದರೆ ಅವರು ಲಾಲ್‌ ಸಲಾಂನಂತಹ ಚಿತ್ರ ಮಾಡುತ್ತಿರಲಿಲ್ಲ ಎಂದು ಹೇಳಿದಾಗ ರಜಿನಿಕಾಂತ್‌ ಅವರು ಭಾವಾತ್ಮಕರಾದರು.

“ನನ್ನ ತಂದೆ ಲಾಲ್‌ ಸಲಾಂ ಚಿತ್ರದ ಸ್ಕ್ರಿಪ್ಟ್‌ ಅನ್ನು ಕೇಳಿದಾಗ ಮೊಯ್ದಿನ್‌ ಭಾಯಿ ಪಾತ್ರ ತನಗೆ ಮಾಡಬಹದೇ ಎಂದು ತಂದೆ ನನ್ನನ್ನು ಕೇಳಿದರು. ಆರಂಭದಲ್ಲಿ ಹಿಂಜರಿದೆ. ಆ ಪಾತ್ರಕ್ಕೆ ಅವರನ್ನು ಆರಿಸುವ ಬಗ್ಗೆ ನಾನು ಅವರು ಸೂಚಿಸುವ ತನಕ ಯೋಚಿಸಲೇ ಇಲ್ಲ,” ಎಂದು ಐಶ್ವರ್ಯ ಹೇಳಿದರು.

ಲಾಲ್‌ ಸಲಾಂ ಒಂದು ಸೂಕ್ಷ್ಮ ವಿಚಾರದ ಸಿನೆಮಾ ಆಗಿದ್ದು ಮಾನವೀಯ ವ್ಯಕ್ತಿ ಮಾತ್ರ ಅದನ್ನು ಮಾಡಲು ಸಾಧ್ಯ ಎಂದು ಹೇಳಿ ತಂದೆಗೆ ಅವರು ಧನ್ಯವಾದ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News