×
Ad

'ಎಂಪುರಾನ್' ವಿವಾದವು ಪೃಥ್ವಿರಾಜ್ ನಟನೆಯ 'ಆಡು ಜೀವಿತಂ' ಚಿತ್ರವನ್ನು ರಾಷ್ಟ್ರೀಯ ಪ್ರಶಸ್ತಿಯಿಂದ ಹೊರಗುಳಿಸಿತು: ನಟಿ ಊರ್ವಶಿ

ಪ್ರಶಸ್ತಿಗಳು ರಾಜಕೀಯಗೊಳ್ಳಬಾರದು ಎಂದ ಖ್ಯಾತ ನಟಿ

Update: 2025-08-05 15:12 IST

ನಟಿ ಊರ್ವಶಿ (Photo credit: keralakaumudi.com)

ಹೊಸದಿಲ್ಲಿ: 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸುತ್ತ ಸುತ್ತುವರಿದಿರುವ ವಿವಾದದ ಕಿಡಿ ಮತ್ತೆ ಹೆಚ್ಚಾಗುತ್ತಿದೆ. ಮುಖ್ಯಭೂಮಿಕೆಯಲ್ಲಿ ಪಾತ್ರ ನಿರ್ವಹಿಸಿದ್ದರೂ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಭಾಜನರಾದ ಮಲೆಯಾಳಂನ ಹಿರಿಯ ನಟಿ ಊರ್ವಶಿ ಪ್ರಶಸ್ತಿಯ ಮಾನದಂಡಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

71ನೇ ರಾಷ್ಟ್ರೀಯ ಪ್ರಶಸ್ತಿಗಳಿಗೆ ಬ್ಲೆಸ್ಸಿ ನಿರ್ದೇಶನ ಹಾಗೂ ಪೃಥ್ವಿರಾಜ್ ಸುಕುಮಾರನ್ ನಾಯಕತ್ವದ ‘ಆಡು ಜೀವಿತಂ – ದಿ ಗೋಟ್ ಲೈಫ್’ ಚಿತ್ರವನ್ನು ಪರಿಗಣಿಸದಿರುವ ಬಗ್ಗೆ ಊರ್ವಶಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಇದಕ್ಕೆ ‘ಎಲ್2-ಎಂಪುರಾನ್’ ಚಿತ್ರದ ಸುತ್ತಲಿನ ವಿವಾದವೇ ಕಾರಣ ಎಂದೂ ಅಭಿಪ್ರಾಯಪಟ್ಟಿದ್ದಾರೆ.

71ನೇ ರಾಷ್ಟ್ರೀಯ ಪ್ರಶಸ್ತಿ ಆಯ್ಕೆ ಸಮಿತಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಊರ್ವಶಿ, “ಆಡುಜೀವಿತಂ – ಗೋಟ್ ಲೈಫ್’ ಚಿತ್ರವನ್ನು ನಿರ್ಲಕ್ಷಿಸಲು ‘ಎಲ್2: ಎಂಪುರಾನ್’ ಚಿತ್ರದ ಸುತ್ತಲಿನ ವಿವಾದವೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. “ಅವರು ‘ಆಡುಜೀವಿತಂ’ ಚಿತ್ರವನ್ನು ಹೇಗೆ ನಿರ್ಲಕ್ಷಿಸಲು ಸಾಧ್ಯ? ಆ ಚಿತ್ರವು ನಜೀಬ್ ನ ಬದುಕು ಹಾಗೂ ಮನಕಲುಕುವ ಚಿತ್ರಕಥೆಗೆ ಜೀವ ತುಂಬಲು ದೈಹಿಕ ಬದಲಾವಣೆ ಮಾಡಿಕೊಂಡು, ತಮ್ಮ ಸಮಯ ಮತ್ತು ಶ್ರಮವನ್ನು ಮೀಸಲಿಟ್ಟಿದ್ದ ಪೃಥ್ವಿರಾಜ್ ಸುಕುಮಾರನ್ ರ ಅದ್ವಿತೀಯ ನಟನೆಯನ್ನು ಹೊಂದಿದೆ. ಆದರೂ ಅವರಿಗೆ ಪ್ರಶಸ್ತಿ ನೀಡಲಾಗಿಲ್ಲ. ಇದೆಲ್ಲ ‘ಎಂಪುರಾನ್’ ವಿವಾದದ ಕಾರಣಕ್ಕೆ ಎಂಬುದು ನಮಗೆ ತಿಳಿದಿದೆ. ಪ್ರಶಸ್ತಿಗಳನ್ನು ರಾಜಕೀಯಗೊಳಿಸಬಾರದು” ಎಂದು ಊರ್ವಶಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ, ಮೋಹನ್ ಲಾಲ್ ನಾಯಕತ್ವದ ಭಾರಿ ಬಜೆಟ್ ನ ‘ಎಲ್2: ಎಂಪುರಾನ್’ ಚಲನಚಿತ್ರವು ಬಲಪಂಥೀಯ ಗುಂಪುಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಇದರ ಬೆನ್ನಿಗೇ, ಚಿತ್ರ ತಂಡವು ಅದಾಗಲೇ ಕೇಂದ್ರ ಚಲನಚಿತ್ರ ಪ್ರಮಾಣ ಪತ್ರ ಮಂಡಳಿಯಿಂದ ಪ್ರಮಾಣೀಕರಣಗೊಂಡಿದ್ದ ಚಿತ್ರಕ್ಕೆ ಸ್ವಯಂಪ್ರೇರಿತವಾಗಿ ಕೆಲ ಬದಲಾವಣೆಗಳನ್ನು ಮಾಡಿತ್ತು. ಈ ಚಿತ್ರವು 2019ರಲ್ಲಿನ ಪೃಥ್ವಿರಾಜ್ ಸುಕುಮಾರನ್ ಅವರ ಚೊಚ್ಚಲ ನಿರ್ದೇಶನದ ‘ಲೂಸಿಫರ್’ ಚಿತ್ರದ ಎರಡನೆ ಭಾಗವಾಗಿತ್ತು. ಈ ಚಿತ್ರಕ್ಕೆ ಮುರಳಿ ಗೋಪಿ ಕತೆ ಬರೆದಿದ್ದರು.

ಈ ಬಾರಿ ಕೇರಳ ರಾಜ್ಯ ಪ್ರಶಸ್ತಿ ಪಟ್ಟಿಯಲ್ಲಿ ಬ್ಲೆಸ್ಸಿ ನಿರ್ದೇಶಿಸಿದ್ದ ಹಾಗೂ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಭೂಮಿಕೆಯಲ್ಲಿದ್ದ ‘ಆಡು ಜೀವಿತಂ – ದಿ ಗೋಟ್ ಲೈಫ್’ ಚಲನಚಿತ್ರ ಒಟ್ಟು ಒಂಭತ್ತು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಈ ಚಿತ್ರದಲ್ಲಿನ ನಟನೆಗಾಗಿ ಪೃಥ್ವಿರಾಜ್ ಸುಕುಮಾರನ್ ಅತ್ಯುತ್ತಮ ನಟ ಪ್ರಶಸ್ತಿಗೆ ಹಾಗೂ ನಿರ್ದೇಶಕ ಬ್ಲೆಸ್ಸಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದರು. ಹೀಗಿದ್ದೂ, 71ನೇ ರಾಷ್ಟ್ರೀಯ ಪ್ರಶಸ್ತಿ ಆಯ್ಕೆಯ ವೇಳೆ ಈ ಚಿತ್ರವನ್ನು ನಿರ್ಲಕ್ಷಿಸಿರುವುದು ಮಲೆಯಾಳಂ ಚಿತ್ರರಂಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಜನಪ್ರಿಯ ನಟಿ ಊರ್ವಶಿ ಅವರಿಗೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸದ್ಯ ಇದೂ ಕೂಡಾ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ‘ಉಲ್ಲೊಳುಕ್ಕು’ ಚಲನಚಿತ್ರದಲ್ಲಿ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ಅವರನ್ನು ಅತ್ಯುತ್ತಮ ಪೋಷಕ ನಟಿ ಎಂಬ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಹಾಗೆಯೇ ಮತ್ತೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಜಯರಾಘವನ್ ಅವರನ್ನೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಊರ್ವಶಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ‘ಉಲ್ಲೊಳುಕ್ಕು’ ಚಲನಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಈ ಬಾರಿ ಅತ್ಯುತ್ತಮ ನಟಿ ಎಂಬ ಕೇರಳ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೀಗಿದ್ದೂ, 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಅವರನ್ನು ಇದೇ ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಇದು ಸಹಜವಾಗಿಯೇ ಊರ್ವಶಿಯವರನ್ನು ಅಸಮಾಧಾನಕ್ಕೀಡಾಗುವಂತೆ ಮಾಡಿದೆ.

ಈ ಕುರಿತು ತಮ್ಮ ಆಕ್ಷೇಪ ವ್ಯಕ್ತಪಡಿಸಿರುವ ಊರ್ವಶಿ, “ಅವರು ಮುಖ್ಯ ಭೂಮಿಕೆಯ ಪಾತ್ರಗಳ ಪ್ರಶಸ್ತಿಗಳನ್ನು ಪೋಷಕ ಪಾತ್ರಗಳಿಗೆ ಪರಿಗಣಿಸುವುದಾದರೆ, ನೈಜ ಪೋಷಕ ಕಲಾವಿದರ ಪಾಡೇನಾಗಬೇಕು? ಹೀಗಾದರೆ, ಅವರು ತಮ್ಮ ಕೌಶಲವನ್ನು ಮತ್ತಷ್ಟು ಪ್ರಯತ್ನಿಸಲು ಹೇಗೆ ಪ್ರೇರಣೆ ದೊರೆಯುತ್ತದೆ? ತಮ್ಮದು ಮುಖ್ಯ ಭೂಮಿಕೆಯ ಪಾತ್ರವೊ ಅಥವಾ ಪೋಷಕ ಪಾತ್ರವೊ ಎಂಬುದನ್ನು ಅವರಿಗೆ ನಿರ್ಧರಿಸಲು ಹೇಗೆ ಸಾಧ್ಯವಾಗುತ್ತದೆ?’ ಎಂದು ಸರಣಿ ಪ್ರಶ್ನೆಗಳನ್ನೆಸೆದಿದ್ದಾರೆ.

ಇದೇ ವೇಳೆ, “2005ರಲ್ಲೂ ‘ಅಚುವಿಂತಡೆ ಅಮ್ಮ’ ಚಿತ್ರದಲ್ಲಿ ನಾನು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರೂ ಕೂಡಾ, ನನಗೆ ಅತ್ಯುತ್ತಮ ಪೋಷಕ ನಟಿ ಎಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ಈ ಚಿತ್ರದಲ್ಲಿ ನಾನು ಇಬ್ಬರು ಮುಖ್ಯ ಮಹಿಳಾ ಪಾತ್ರಧಾರಿಗಳ ಪೈಕಿ ಓರ್ವಳಾಗಿದ್ದೆ. ಆ ಚಿತ್ರದ ಮೂಲಕ ನಾನು ಆರು ವರ್ಷಗಳ ನಂತರ ನಟನೆಗೆ ಮರಳಿದ್ದೆ. ಆದರೆ, ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಅನುಭವಿಸಿದ್ದ ಸಾರಿಕಾಗೆ ಆ ಸಾಲಿನಲ್ಲಿ ‘ಪರ್ಝಾನಿಯಾ’ ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು” ಎಂದು ಅವರು ಸ್ಮರಿಸಿದ್ದಾರೆ.

 “ನಾನು ನನಗಾಗಿ ಈ ವಿಷಯವನ್ನು ಎತ್ತುತ್ತಿಲ್ಲ. ಬದಲಿಗೆ ಇಂತಹುದೇ ಸ್ಥಿತಿಯನ್ನು ಇನ್ನೂ ಹಲವು ಯುವ ಮಹಿಳಾ ಕಲಾವಿದರು ಅನುಭವಿಸದಿರಲಿ ಎಂಬ ಕಾರಣಕ್ಕೆ ಪ್ರಸ್ತಾಪಿಸುತ್ತಿದ್ದೇನೆ. ನಾನು ಯಾವುದೇ ರಾಜಕೀಯ ಪಕ್ಷವನ್ನು ಅವಲಂಬಿಸದೆ ಇರುವುದರಿಂದ, ನಾನು ಮಾತನಾಡಬಲ್ಲೆ. ನಾನು ತೆರಿಗೆ ಪಾವತಿಸುತ್ತಿದ್ದು, ನನಗೆ ಯಾವುದೇ ಹೆದರಿಕೆ ಇಲ್ಲ. ನಾನಿದನ್ನು ನನಗಾಗಿ ಪ್ರಸ್ತಾಪಿಸುತ್ತಿಲ್ಲ. ಆದರೆ, ನನ್ನ ಹಿಂದೆ ನಡೆದು ಬರುತ್ತಿರುವವರಿಗಾಗಿ ಪ್ರಸ್ತಾಪಿಸುತ್ತಿದ್ದೇನೆ. “ಊರ್ವಶಿ ಕೂಡಾ ತನಗೆ ಪ್ರಶಸ್ತಿ ಬಂದಾಗ ಸುಮ್ಮನಿದ್ದಳು, ಅಂದಮೇಲೆ ನೀವೇಕೆ ಧ್ವನಿ ಎತ್ತುತ್ತಿದ್ದೀರಿ?” ಎಂದು ಅವರಿಗೆ ಯಾರೂ ಕೇಳಬಾರದು ಎಂಬ ಕಾರಣಕ್ಕೆ ಈ ಕುರಿತು ಧ್ವನಿ ಎತ್ತಿದ್ದೇನೆ” ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News