ಗೋಳಿಯಡಿ ಗೋಪಾಲಣ್ಣ
ಮಂಗಳೂರು: ಉಳ್ಳಾಲದ ಖ್ಯಾತ ಧಾರ್ಮಿಕ, ಸಾಮಾಜಿಕ ನೇತಾರ, ಉಳ್ಳಾಲ ಶ್ರೀ ಅಯ್ಯಪ್ಪ ಭಜನಾ ಮಂದಿರ ದ ಅಧ್ಯಕ್ಷ ಗೋಪಾಲ ಗೋಳಿಯಡಿ(83) ಅವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಗೋಳಿಯಡಿಯ ಸ್ವಗೃಹ ದಲ್ಲಿ ನಿಧನರಾದರು.
ಮೃತರು ಪತ್ನಿ, ಮೂರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಗೋಲ್ದಡಿ ಗೋಪಾಲಣ್ಣ ಎಂದೇ ಖ್ಯಾತರಾ ಗಿದ್ದ ಗೋಪಾಲ ಗೋಳಿಯಡಿ ಅವರು 2002ರಲ್ಲಿ ನಡೆದಿದ್ದ ಉಳ್ಳಾಲದ ನಾಗಮಂಡಲದ ರೂವಾರಿಗಳಾಗಿದ್ದರು. ಪರಿಸರದ ಮಲರಾಯ ದೊಂಪದ ಬಲಿ ಉತ್ಸವ, ಉಳಿಯ ಕ್ಷೇತ್ರದ ಬ್ರಹ್ಮ ಕಲಶ, ಜೀರ್ಣೋದ್ದಾರ ಸಮಿತಿಯಲ್ಲಿ ಹಾಗೂ ಸಾರ್ವಜನಿಕ ಶಾರದೋತ್ಸವ ಸಮಿತಿಯು ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದರು.
ಉಳ್ಳಾಲ ರುದ್ರಭೂಮಿ ನಿರ್ಮಾಣ ಪೂರ್ವದಲ್ಲಿ ನೂರಾರು ಶವ ಸಂಸ್ಕಾರ ನಿರ್ವಹಣೆ ಮಾಡಿದ್ದರು. ಬಿಲ್ಲವರ ಗೋಕರ್ಣ ನಾಥ ಸಂಘದ ಸಾಮಾಜಿಕ ಚತುವಟಿಕೆ ಗಳಲ್ಲೂ ಸಕ್ರಿಯರಾಗಿದ್ದರು.
ಅವರ ನಿಧನಕ್ಕೆ ಉಳಿಯ ಧರ್ಮರಸರ ಕ್ಷೇತ್ರದ ಧರ್ಮದರ್ಶಿ ದೇವುಮೂಲ್ಯಣ್ಣ , ಸಾರ್ವಜನಿಕ ಶಾರದೋತ್ಸವ ಸಮಿತಿಯ ಅಧ್ಯಕ್ಷ ಭರತ್ ಕುಮಾರ್, ಶಾರದಾ ಸೇವಾ ಟ್ರಸ್ಟ್ ನ ಪ್ರಧಾನ ಟ್ರಸ್ಟಿ ಶ್ರೀಕರ ಕಿಣಿ, ವಿದ್ಯಾ ವಿನಾಯಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯ ಉಳ್ಳಾಲ್, ವಿದ್ಯಾರಣ್ಯ ಕಲಾವೃಂದದ ಅಧ್ಯಕ್ಷ ಪ್ರವೀಣ್ ಸುವರ್ಣ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.