ಕಸ್ತೂರಿ ಪ್ರಭಾಕರ ಪೈ
ಮಂಗಳೂರು, ಅ.26: ನಗರದ ಬಲ್ಮಠ ನಿವಾಸಿ, ಉದ್ಯಮಿ ಹಾಗೂ ದ.ಕ. ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿದ್ದ ಕಸ್ತೂರಿ ಪ್ರಭಾಕರ್ ಪೈ (75) ಶನಿವಾರ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ, ಪುತ್ರ ಮತ್ತು ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
1950ರಲ್ಲಿ ಜನಿಸಿದ ಅವರು ಕೆನರಾ ಹೈಸ್ಕೂಲ್ (ಮೈನ್)ನಲ್ಲಿ ಶಿಕ್ಷಣ ಪಡೆದರು. 1968-73ರಲ್ಲಿ ಮಣಿಪಾಲ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿ ಬಳಿಕ ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಸದರ್ನ್ ಮೆಥೋಡಿಸ್ಟ್ ವಿವಿಯಿಂದ ಎಂಬಿಎ ಪದವಿ ಪಡೆದರು.
ಹುಟ್ಟೂರಿಗೆ ಮರಳಿದ ನಂತರ ಕುಟುಂಬ ಉದ್ಯಮವಾದ ಕಸ್ತೂರಿ ಸಮೂಹ ಸಂಸ್ಥೆಗೆ ಸೇರಿ ಫಿಶ್ ಮೀಲ್ ಮತ್ತು ಫಿಶ್ ಆಯಿಲ್ ಉತ್ಪಾದನಾ ವಿಭಾಗವನ್ನು ನಿರ್ವಹಿಸುತ್ತಿದ್ದರು. ಬಳಿಕ ಆಟೋಮೊಬೈಲ್ ಬಿಡಿಭಾಗಗಳು ಮತ್ತು ಸಿಮೆಂಟ್‌ನ ಸಗಟು ಮಾರಾಟಗಾರರಾದ ಕ್ವೆಸ್ಟ್ ಮಾರ್ಕೆಟಿಂಗ್ ಸರ್ವೀಸಸ್‌ನ ಮುಖ್ಯಸ್ಥರಾಗಿದ್ದರು. ಸಾರಿಗೆ ಮತ್ತು ರೆಡಿ ಮಿಕ್ಸ್ ಕಾಂಕ್ರಿಟ್ ಪಂಪಿಂಗ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ಬೆಂಕೆಮ್ ಕಾರ್ಪೊರೇಷನ್ ಮತ್ತು ಆಸ್ಪಾಲಾಜಿಸ್ಟಿಕ್ಸ್ ಪ್ರೈ.ಲಿ.ನ ನಿರ್ದೇಶಕರಾಗಿದ್ದರು.
ಸಾಮಾಜಿಕವಾಗಿ ಸಕ್ರಿಯರಾಗಿದ್ದ ಕಸ್ತೂರಿ ಪ್ರಭಾಕರ್ ಪೈ 2017ರಿಂದ ದಕ್ಷಿಣ ಕನ್ನಡ ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿದ್ದರು. ಅದಕ್ಕೂ ಮೊದಲು ಕಾರ್ಯದರ್ಶಿಯಾಗಿ, ಉಪಾಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದರು.
*ಸಂತಾಪ: ಸುಮಾರು ಮೂರು ದಶಕಗಳ ಕಾಲ ಕಸ್ತೂರಿ ಪ್ರಭಾಕರ್ ಪೈ ಅವರ ಸೇವೆಯನ್ನು ಗುರುತಿಸಿರುವ ಸಂಘವು ಸಂತಾಪ ಸೂಚಿಸಿದೆ.