ಕೃಷಿಯಲ್ಲಿ ಲಿಂಗ ಅಸಮಾನತೆ
ಮೂಲಭೂತ ಸೇವೆಗಳು, ಭೂ ನಿಯಂತ್ರಣ, ಆಸ್ತಿಯ ಉತ್ತರಾಧಿಕಾರ ಮತ್ತು ಆರ್ಥಿಕ ಸೇರ್ಪಡೆಗೆ ಮಹಿಳೆಯರ ಪ್ರವೇಶವನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಸಾಮಾಜಿಕ ಮತ್ತು ಆರ್ಥಿಕ ರಕ್ಷಣೆಯ ಮೂಲಕ ಮಹಿಳೆಯರ ಬೆಳವಣಿಗೆಗೆ ಸಮಾನ ಅವಕಾಶಗಳನ್ನು ಒದಗಿಸಬೇಕು. ಕೃಷಿ ಭೂಮಿಯ ಮೇಲಿನ ಒಡೆತನ, ಆಸ್ತಿ ಹಕ್ಕು ಮತ್ತು ಕೃಷಿ ಕಾರ್ಮಿಕರ ವೇತನದ ವಿಷಯದಲ್ಲಿ ಲಿಂಗ ಸಮಾನತೆಯನ್ನು ಸಾಧಿಸುವಲ್ಲಿ ಅಂತರ್‌ರಾಷ್ಟ್ರೀಯ ಕೃಷಿ ಮಹಿಳೆಯರ ವರ್ಷದ ಘೋಷಣೆ ಪ್ರಮುಖ ಮೈಲಿಗಲ್ಲಾಗಬೇಕು. ಇಲ್ಲದಿದ್ದರೆ ಘೋಷಣೆ ಕೇವಲ ಮಾತಿನಲ್ಲಿಯೇ ಉಳಿದುಬಿಡುತ್ತದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2026ನ್ನು ಅಂತರ್‌ರಾಷ್ಟ್ರೀಯ ರೈತ ಮಹಿಳೆಯರ ವರ್ಷವೆಂದು ಘೋಷಿಸಿದೆ. ಜಾಗತಿಕ ಕೃಷಿಯಲ್ಲಿ ಮಹಿಳೆಯರ ಪ್ರಾಮುಖ್ಯತೆಯನ್ನು ನಿರ್ಣಯಿಸುವ, ಆಸ್ತಿ ಹಕ್ಕು ಸೇರಿದಂತೆ ಮಹಿಳೆಯರು ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಕುರಿತು ಜಾಗೃತಿ ಮೂಡಿಸುವ ಮತ್ತು ಇವುಗಳಿಗೆ ಪರಿಹಾರವನ್ನು ಒದಗಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು ಈ ಘೋಷಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ.
ಅಭಿವೃದ್ಧಿಶೀಲ ದೇಶಗಳಲ್ಲಿ ಶೇ. 60ರಿಂದ 80ರಷ್ಟು ಆಹಾರ ಉತ್ಪಾದನೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ. ದಕ್ಷಿಣ ಏಶ್ಯದಲ್ಲಿ ಶೇ. 39ರಷ್ಟು ಮಹಿಳೆಯರು ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಆದರೆ, ಕೃಷಿ ಭೂಮಿಯ ಒಡೆತನವನ್ನು ಹೊಂದಿರುವ ಮಹಿಳೆಯರ ಪ್ರಮಾಣ ಶೇ.14ರಷ್ಟು ಮಾತ್ರ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಭಾರತದಲ್ಲಿ ಇದಕ್ಕಿಂತ ವಿಭಿನ್ನವಾಗೇನೂ ಇಲ್ಲ. ಭಾರತೀಯ ಕೃಷಿ ಕ್ಷೇತ್ರದಲ್ಲಿ ಶೇ. 80ರಷ್ಟು ಮಹಿಳೆಯರು ತಮ್ಮ ಜೀವನವನ್ನು ಕಂಡುಕೊಳ್ಳುವ ಮೂಲಕ ಕೃಷಿ ಕಾರ್ಮಿಕ ಬಲದಲ್ಲಿ ಗಣನೀಯ ಭಾಗವನ್ನು ಹೊಂದಿದ್ದಾರೆ. ಆದರೆ, ಕೃಷಿ ಭೂಮಿಯ ಒಡೆತನವನ್ನು ಹೊಂದಿರುವ ಮಹಿಳೆಯರ ಶೇಕಡಾವಾರು ಪ್ರಮಾಣ ಶೇ.14ರಷ್ಟು ಮಾತ್ರ. ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಮಹಿಳಾ ಭೂ ಮಾಲಕತ್ವದ ಪ್ರಮಾಣ ಶೇ. 8.3ಕ್ಕೆ ಕುಸಿದಿದೆ.
ರೈತರಾಗಿ ಮತ್ತು ಕೃಷಿ ಕಾರ್ಮಿಕರಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಹಿಳೆಯರು ಭಾರತದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ಕೃಷಿಯಲ್ಲಿ ಬಿತ್ತನೆ, ನಾಟಿ, ಕಳೆ ಕೀಳುವುದು, ಕೊಯ್ಲು, ಸುಗ್ಗಿಯ ನಂತರದ ಚಟುವಟಿಕೆಗಳು, ಹೈನುಗಾರಿಕೆಯಲ್ಲಿ ದನಗಳ ನಿರ್ವಹಣೆ, ಮೇವು ಸಂಗ್ರಹಣೆ, ಹಾಲು ಕರೆಯುವುದು ಮತ್ತು ಆಹಾರ ಸಂಸ್ಕರಣೆ ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ವೈವಿಧ್ಯತೆಯಿಂದ ಕೂಡಿದೆ. ಕೃಷಿಯ ಉಪ ಕಸುಬುಗಳಾದ ಹೈನುಗಾರಿಕೆ, ಕೋಳಿ ಸಾಕಣೆ ಮತ್ತು ಮೀನು ಸಾಕಣೆಗಳಲ್ಲಿಯೂ ಗ್ರಾಮೀಣ ಮಹಿಳೆಯರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಜೀವನೋಪಾಯಕ್ಕಾಗಿ ಶೇ.48ರಷ್ಟು ಮಹಿಳೆಯರು ಕೃಷಿ ಕಾರ್ಮಿಕರಾಗಿ ಮತ್ತು ಶೇ. 33ರಷ್ಟು ಮಹಿಳೆಯರು ಕೃಷಿಕರಾಗಿ ತೊಡಗಿಕೊಂಡಿದ್ದಾರೆ. ಆದರೂ, ಕೃಷಿ ಭೂಮಿಯ ಮೇಲಿನ ಒಡೆತನ ಮತ್ತು ಆಸ್ತಿ ಹಕ್ಕಿನ ವಿಷಯದಲ್ಲಿ ಲಿಂಗ ಅಸಮಾನತೆ ಇರುವುದನ್ನು ಕಾಣಬಹುದು. ಬಹಳ ಮುಖ್ಯವಾಗಿ, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಮತ್ತು ಕುಟುಂಬದ ಸದಸ್ಯರಿಗೆ ಅವಶ್ಯವಾದ ಆಹಾರ ತಯಾರಿಕೆ, ಕುಟುಂಬದ ಸದಸ್ಯರ ಯೋಗಕ್ಷೇಮವನ್ನು ನೋಡಿಕೊಳ್ಳುವುದು, ಮನೆಯ ಕೆಲಸ ಸೇರಿದಂತೆ ಮಹಿಳೆಯರು ವೇತನವಿಲ್ಲದ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ.
ಈ ಲಿಂಗ ಅಸಮಾನತೆ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಭೂಮಿಯ ಮಾಲಕತ್ವವನ್ನು ಹೊಂದಿರುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಕಡಿಮೆಯಿರುವುದರಿಂದ ಅವರಿಗೆ ಬ್ಯಾಂಕ್ ಅಥವಾ ಬೇರೆ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆಯುವುದು ತುಂಬಾ ಕಷ್ಟಕರವಾಗಿದೆ. ಸಾಲದ ಕೊರತೆಯ ಜೊತೆಗೆ ತಂತ್ರಜ್ಞಾನ ಮತ್ತು ಕೌಶಲ್ಯವನ್ನು ವೃದ್ಧಿಗೊಳಿಸಿಕೊಳ್ಳಲು ತರಬೇತಿಯ ಕೊರತೆಯು ಉತ್ಪಾದಕತೆ ಮತ್ತು ಆದಾಯ ಗಳಿಕೆಯ ಮಹಿಳೆಯರ ಸಾಮರ್ಥ್ಯವನ್ನು ಮಿತಗೊಳಿಸಿದೆ. ಇದರಿಂದಾಗಿ ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ತಮ್ಮ ಜೀವನಮಟ್ಟವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಆಹಾರ ಭದ್ರತೆಗೆ ಮಹಿಳೆಯರ ಕೊಡುಗೆ ನಿರ್ಣಾಯಕವಾಗಿದ್ದು ಜಾನುವಾರು ನಿರ್ವಹಣೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯು ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯ ಮೇಲೆ ಗಮನಾರ್ಹವಾದ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ ಕೃಷಿಯಲ್ಲಿ ಮಹಿಳೆಯರ ನಿರ್ಧಾರ ತೆಗೆದುಕೊಳ್ಳುವಿಕೆಯ ಶಕ್ತಿ ಮತ್ತು ನಾಯಕತ್ವದ ಪಾತ್ರ ಅತ್ಯಂತ ಪ್ರಮುಖವಾದುದು. ಆದರೆ ಸಾಲ ಸೌಲಭ್ಯಗಳ ಲಭ್ಯತೆಯ ಕೊರತೆ ನಿರ್ಧಾರ ತೆಗೆದುಕೊಳ್ಳುವ ಮಹಿಳೆಯರ ಶಕ್ತಿಯನ್ನು ಕಡಿಮೆ ಮಾಡಿದೆ. ಮಹಿಳಾ ಸ್ವ-ಸಹಾಯ ಗುಂಪುಗಳು ಕಿರು ಪ್ರಮಾಣದಲ್ಲಿ ಸಾಲ-ಸೌಲಭ್ಯ ಸಿಗುತ್ತಿದ್ದರೂ ಅದರಿಂದ ಅಂತಹ ಗಮನಾರ್ಹವಾದ ಬೆಳವಣಿಗೆಯನ್ನೇನೂ ನಿರೀಕ್ಷಿಸಲು ಸಾಧ್ಯವಿಲ್ಲ.
ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಸಬಲೀಕರಣವನ್ನು ಉತ್ತೇಜಿಸುವ ದೃಷ್ಟಿಯಿಂದ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಭಾರತ ಸರಕಾರವು ಸಣ್ಣ ಮಹಿಳಾ ಹಿಡುವಳಿದಾರರಲ್ಲಿ ಕೌಶಲ್ಯವನ್ನು ಹೆಚ್ಚಿಸುವ ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ‘ಮಹಿಳಾ ಕಿಸಾನ್ ಸಶಸ್ತ್ರೀಕರಣ ಪರಿಯೋಜನಾ’ ಮತ್ತು ಕೃಷಿ ಯಾಂತ್ರೀಕರಣದ ಉಪ ಯೋಜನೆಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಿದೆ. ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ಕೃಷಿ ಯಂತ್ರೋಪಕರಣಗಳ ಮೇಲೆ ಶೇ.50ರಿಂದ 80ರವರೆಗೆ ಸಬ್ಸಿಡಿ ಸಹ ನೀಡುತ್ತಿದೆ. ವಾರ್ಷಿಕ ಆಯವ್ಯಯದಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯ ಅಡಿಯಲ್ಲಿ ಮಹಿಳಾ ಕೃಷಿಕರಿಗಾಗಿ ಶೇ.30ರಷ್ಟು ಅನುದಾನವನ್ನು ಮೀಸಲಿಟ್ಟಿದೆ. ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ತಂತ್ರಜ್ಞಾನ ಮಿಷನ್, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್‌ಗಳೂ ಕೂಡ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ.
ಸಂವಿಧಾನದ 4ನೇ ಭಾಗವು ರಾಜ್ಯ ನೀತಿಯ ನಿರ್ದೇಶನ ತತ್ವಗಳನ್ನು ಪಟ್ಟಿ ಮಾಡುತ್ತದೆ, ಸಂವಿಧಾನದ 39(ಬಿ) ವಿಧಿಯು ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನದ ಖಾತರಿಯನ್ನು ನಿರ್ದೇಶಿಸುತ್ತದೆ. ಅದೇ ಅನುಚ್ಛೇದದ ವಿಭಾಗ(ಎ) ನಿರ್ದಿಷ್ಟವಾಗಿ ನಾಗರಿಕರು, ಪುರುಷರು ಮತ್ತು ಮಹಿಳೆಯರು ಸಮಾನವಾಗಿ, ಜೀವನೋಪಾಯದ ಸಮರ್ಪಕ ಮಾರ್ಗದ ಹಕ್ಕನ್ನು ಹೊಂದಲು ರಾಜ್ಯನೀತಿಯನ್ನು ನಿರ್ದೇಶಿಸುತ್ತದೆ. ಆದರೆ ಇಂದಿಗೂ ಕೃಷಿ ಕಾರ್ಮಿಕರಲ್ಲಿ ಮಹಿಳೆಯರು ಮತ್ತು ಪುರುಷ ಕಾರ್ಮಿಕರ ವೇತನದ ನಡುವೆ ಅಜಗಜಾಂತರವಿರುವುದನ್ನು ಕಾಣಬಹುದು. ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಕೆಲಸ ಮಾಡಿದರೂ ಕೂಡ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಕೂಲಿಯನ್ನು ಕೊಡಲಾಗುತ್ತಿದೆ. ಮಹಿಳಾ ಕೃಷಿ ಕಾರ್ಮಿಕರಿಗೆ ಸಮಾನ ವೇತನವನ್ನು ಸ್ಪಷ್ಟವಾಗಿ ನಿರಾಕರಿಸಲಾಗುತ್ತಿದೆ.
ಮಹಿಳಾ ರೈತರಿಗೆ ಕೃಷಿ ಮತ್ತು ಜೀವನೋಪಾಯಕ್ಕೆ ಪೂರಕವಾಗಿ ತಾಂತ್ರಿಕ ಪರಿಣತಿ, ಕೃಷಿ ಆಧಾರಿತ ಜೀವನೋಪಾಯಗಳ ಮೂಲಕ ವೈವಿಧ್ಯೀಕರಣ, ಮಾಹಿತಿ ಮತ್ತು ಹವಾಮಾನ ಸಲಹೆಗಳು, ತಂತ್ರಜ್ಞಾನಗಳ ಬಳಕೆ ಮತ್ತು ಸಾಮಾಜಿಕ ನಡವಳಿಕೆಯ ಬದಲಾವಣೆಯ ಮಧ್ಯಸ್ಥಿಕೆಗಳನ್ನು ಕೃಷಿ ಮಹಿಳೆಯರೊಂದಿಗೆ ಸಂಯೋಜಿಸುವುದು ಇಂದಿನ ಅಗತ್ಯವಾಗಿದೆ. ಲಿಂಗ ಆಧಾರಿತ ತಾರತಮ್ಯವನ್ನು ಕೊನೆಗೊಳಿಸುವುದರಿಂದ ಮಾತ್ರ ಬಡತನವನ್ನು ಕೊನೆಗೊಳಿಸುವ ಸವಾಲನ್ನು ಸಾಧಿಸಿ ಮಹಿಳಾ ಸಬಲೀಕರಣವನ್ನು ಸಾಧಿಸಬಹುದು. ಲಿಂಗ ಅಸಮಾನತೆಯು ಮಹಿಳೆಯರ ಮೂಲಭೂತ ಹಕ್ಕುಗಳು ಮತ್ತು ಯೋಗಕ್ಷೇಮಕ್ಕಾಗಿ ಅವಕಾಶಗಳನ್ನು ಕಸಿದುಕೊಳ್ಳುತ್ತದೆ ಮತ್ತು ಮಹಿಳೆಯರ ಜೀವನದ ಹಕ್ಕುಗಳನ್ನು ಕುಗ್ಗಿಸುತ್ತವೆ.
ಲಿಂಗ ಸಮಾನತೆಯು ಕೇವಲ ಪುರುಷರು ಮತ್ತು ಸ್ತ್ರೀಯರ ನಡುವಿನ ಸಮಾನತೆಯ ವಿಷಯ ಮಾತ್ರವಲ್ಲ, ಬದಲಾಗಿ ಒಂದು ದೇಶದ ಅಭಿವೃದ್ಧಿಯ ಪ್ರಮುಖ ಮಾನದಂಡಗಳಾದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಮತ್ತು ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಎನ್‌ಪಿ)ಗಳ ಮೇಲೂ ಕೂಡ ಲಿಂಗ ಸಮಾನತೆ ಪ್ರಭಾವ ಬೀರುತ್ತದೆ. ಆದ್ದರಿಂದಲೇ 1995ರಲ್ಲಿ ವಿಶ್ವ ಆರ್ಥಿಕ ಅಭಿವೃದ್ಧಿ ವರದಿಯಲ್ಲಿ ಮೊದಲ ಬಾರಿಗೆ ಲಿಂಗ ಸಮಾನತೆಯನ್ನು ಅಳೆಯಲು ಲಿಂಗ ಅಭಿವೃದ್ಧಿ ಸೂಚ್ಯಂಕವನ್ನು ವಿನ್ಯಾಸಗೊಳಿಸಿ ಮಾನವ ಅಭಿವೃದ್ಧಿ ವರದಿಯಲ್ಲಿ ಪರಿಚಯಿಸಲಾಯಿತು. ಈ ಅಳತೆಗಳು ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಲಿಂಗ-ಸೂಕ್ಷ್ಮದ ಆಯಾಮವನ್ನು ಸೇರಿಸುವ ಗುರಿಯನ್ನು ಹೊಂದಿದ್ದವು.
ಲಿಂಗ ಸಮಾನತೆಯು ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಧಾನ ಗುರಿಗಳಲ್ಲಿ ಒಂದಾಗಿದೆ. ಆದ್ದರಿಂದ ಜಾಗತಿಕ ವಾರ್ಷಿಕ ಲಿಂಗ ಅಸಮಾನತೆಯ 2023ರ ಪ್ರಮುಖ ಅಂಶಗಳು ಇತರ ಗುರಿಗಳ ನಡುವೆ ಸುಸ್ಥಿರ ಅಭಿವೃದ್ಧಿ ಗುರಿಯ ಸಾಧನೆಯ ಕಡೆಗೆ ವಿಶ್ವದ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ. ಲಿಂಗ ಅಸಮಾನತೆಯು ಅತ್ಯಂತ ಹಳೆಯ ಮತ್ತು ವ್ಯಾಪಕವಾದ ರೂಪಗಳಲ್ಲಿ ಒಂದಾಗಿದೆ. ಶತಮಾನಗಳಿಂದ ಇದು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಜೀವನದಿಂದ ಮಹಿಳೆಯರನ್ನು ತಾರತಮ್ಯದಿಂದ ನೋಡುವ ಮೂಲಕ ಅವರನ್ನು ಹೊರಗಿಡಲು ಕಾರಣವಾಗಿದೆ. ಲಿಂಗ ಅಸಮಾನತೆಯು ನಾಯಕತ್ವದ ಪಾತ್ರಗಳಿಂದ ಮಹಿಳೆಯರನ್ನು ನಿರ್ಬಂಧಿಸಿದೆ ಮತ್ತು ಹೆಚ್ಚುತ್ತಿರುವ ಲಿಂಗ ಆಧಾರಿತ ಹಿಂಸೆಗೆ ಕಾರಣವಾಗಿದೆ. ಲಿಂಗ ತಾರತಮ್ಯವು ಮಹಿಳಾ ಸಬಲೀಕರಣಕ್ಕೆ ದೊಡ್ಡ ಸವಾಲನ್ನೊಡ್ಡಿದ್ದು ಲಿಂಗ ಅಸಮಾನತೆಯನ್ನು ತೊಡೆದು ಹಾಕದೆ ಮಹಿಳಾ ಸಬಲೀಕರಣ ಸಾಧ್ಯವಿಲ್ಲ.
ಮೂಲಭೂತ ಸೇವೆಗಳು, ಭೂ ನಿಯಂತ್ರಣ, ಆಸ್ತಿಯ ಉತ್ತರಾಧಿಕಾರ ಮತ್ತು ಆರ್ಥಿಕ ಸೇರ್ಪಡೆಗೆ ಮಹಿಳೆಯರ ಪ್ರವೇಶವನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಸಾಮಾಜಿಕ ಮತ್ತು ಆರ್ಥಿಕ ರಕ್ಷಣೆಯ ಮೂಲಕ ಮಹಿಳೆಯರ ಬೆಳವಣಿಗೆಗೆ ಸಮಾನ ಅವಕಾಶಗಳನ್ನು ಒದಗಿಸಬೇಕು. ಕೃಷಿ ಭೂಮಿಯ ಮೇಲಿನ ಒಡೆತನ, ಆಸ್ತಿ ಹಕ್ಕು ಮತ್ತು ಕೃಷಿ ಕಾರ್ಮಿಕರ ವೇತನದ ವಿಷಯದಲ್ಲಿ ಲಿಂಗ ಸಮಾನತೆಯನ್ನು ಸಾಧಿಸುವಲ್ಲಿ ಅಂತರ್‌ರಾಷ್ಟ್ರೀಯ ಕೃಷಿ ಮಹಿಳೆಯರ ವರ್ಷದ ಘೋಷಣೆ ಪ್ರಮುಖ ಮೈಲಿಗಲ್ಲಾಗಬೇಕು. ಇಲ್ಲದಿದ್ದರೆ ಘೋಷಣೆ ಕೇವಲ ಮಾತಿನಲ್ಲಿಯೇ ಉಳಿದುಬಿಡುತ್ತದೆ.