'ದುಬೈ ರನ್'ನಲ್ಲಿ ಮಿಂಚಿದ 'ಬ್ಯಾರಿಗಳು' : ಅತೀ ಉದ್ದನೆಯ ಯುಎಇ ಧ್ವಜದ ವೀಡಿಯೋ ಹಂಚಿಕೊಂಡ ದುಬೈ ರಾಜಕುಮಾರ ಶೇಖ್ ಹಮ್ದಾನ್
ದುಬೈ : ಆರೋಗ್ಯ, ಫಿಟ್‌ನೆಸ್, ಮನರಂಜನೆ ಮತ್ತು ಸಮುದಾಯ ಒಗ್ಗಟ್ಟಿನ ಹಿನ್ನೆಲೆಯಲ್ಲಿ ರವಿವಾರ ದುಬೈಯ ಶೇಖ್ ಝಾಯೆದ್ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಐತಿಹಾಸಿಕ 'ದುಬೈ ರನ್-2025' ಓಟದ ಕಾರ್ಯಕ್ರಮದಲ್ಲಿ ಯುಎಇಯಲ್ಲಿ ನೆಲೆಸಿರುವ ಬ್ಯಾರಿ ಅನಿವಾಸಿ ಸಮುದಾಯವು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಲಕ್ಷಾಂತರ ಮಂದಿ ಸೇರಿದ್ದ 'ದುಬೈ ರನ್' ಕಾರ್ಯಕ್ರಮದಲ್ಲಿ ಯುಎಇಯಲ್ಲಿ ನೆಲೆಸಿರುವ ಬ್ಯಾರಿ ಅನಿವಾಸಿ ಸಮುದಾಯವು ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(BCCI) ಅಧ್ಯಕ್ಷ ಹಿದಾಯತ್ ಅಡ್ಡೂರು ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, 'ದುಬೈ ರನ್'ಗೆ ಮೆರುಗು ತಂದುಕೊಟ್ಟಿದೆ.
ಕಳೆದ ಹಲವು ದಿನಗಳಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಡ್ಡೂರು ನೇತೃತ್ವದಲ್ಲಿ ಪೂರ್ವ ತಯಾರಿ ನಡೆಸಿದ್ದ ಅನಿವಾಸಿ ಬ್ಯಾರಿಗಳು, ತಮ್ಮದೇ ಆದ 'ದುಬೈ ಬ್ಯಾರೀಸ್' ಎಂದು ಬರೆದಿರುವ ಟೀ-ಶರ್ಟ್ ಧರಿಸುವ ಮೂಲಕ ಪಾಲ್ಗೊಂಡು, ಅತೀ ಉದ್ದನೆಯ ಯುಎಇ ಧ್ವಜವನ್ನು ಹಾರಿಸುತ್ತ, ಓಟದ ಉದ್ದಕ್ಕೂ ಕನ್ನಡ, ಬ್ಯಾರಿ ಹಾಡುಗಳನ್ನು ಹಾಡುತ್ತ ಸಂಭ್ರಮಿಸಿದರಲ್ಲದೆ, ಈ ಕಾರ್ಯಕ್ರಮದಲ್ಲಿ ಸೇರಿದ್ದ ಜನರ ಗಮನ ಸೆಳೆದರು.
ದುಬೈ ರಾಜಕುಮಾರ ಶೇಖ್ ಹಮ್ದಾನ್ ಅವರು ತಮ್ಮ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಐತಿಹಾಸಿಕ ದುಬೈ ರನ್‌ನಲ್ಲಿ ಪಾಲ್ಗೊಂಡ ದುಬೈನ ಬ್ಯಾರಿ ಸಮುದಾಯದ ಸದಸ್ಯರು ಹಾರಿಸಿದ ಉದ್ದನೆಯ ಯುಎಇ ಧ್ವಜದ ಚಿತ್ರಣದ ವೀಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಬ್ಯಾರಿ ಸಮುದಾಯದ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದಾರೆ.
ಹಿದಾಯತ್ ಅಡ್ಡೂರು ನೇತೃತ್ವದಲ್ಲಿ, ಅಶ್ರಫ್ ಶಾ ಮಾಂತೂರು, ಸಲೀಂ ಮೂಡಬಿದ್ರೆ, ಸಮದ್ ಬಿರಾಲಿ, ಮುಹಮ್ಮದ್ ಆಶಿಕ್(ಬದ್ರಿಯಾ ಫ್ರೆಂಡ್ಸ್), ಇಕ್ರಂ ಮೂಳೂರು, ಸಂಶುದ್ದೀನ್ ಪಿಲಿಗೊಡು, ನೌಫಾಲ್, ಅಕ್ಬರ್, ಯೂಸುಫ್ ಶೇಖ್, ಅದ್ದು ಹೊನ್ನಾವರ, ಸೋಶಿಯಲ್ ಇನ್ಫ್ಲುಯೆನ್ಸರ್ ನಝೀಹ ಫಾತಿಮಾ, ಶುಕೂರ್ ಉಳ್ಳಾಲ, ಆಸೀಫ್ ಕಣ್ಣಂಗಾರ್, ನವಾಝ್ ಕೊಳ್ತಮಜಲು, ನಝೀರ್ ವಾಮಂಜೂರು, ಸನಾನ್ ಸೇರಿದಂತೆ ಸಾವಿರಾರು ಬ್ಯಾರಿಗಳು ಕುಟುಂಬ ಸಮೇತರಾಗಿ ಓಟದಲ್ಲಿ ಭಾಗವಹಿಸಿದ್ದರು.