ದುಬೈ ಬ್ಯಾರಿ ಮೇಳದಲ್ಲಿ ಡಾ. ತುಂಬೆ ಮೊಯ್ದಿನ್ ಅವರಿಗೆ ʼಗ್ಲೋಬಲ್ ಬಿಝಿನೆಸ್ ಐಕನ್- 2025ʼ ಪ್ರಶಸ್ತಿ ಪ್ರದಾನ
ದುಬೈ : ದುಬೈನ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ನಡೆದ ʼಬ್ಯಾರಿ ಮೇಳ 2025ʼರಲ್ಲಿ ತುಂಬೆ ಗ್ರೂಪ್ ಅಧ್ಯಕ್ಷರಾದ ಡಾ. ತುಂಬೆ ಮೊಯ್ದಿನ್ ಅವರಿಗೆ ʼಗ್ಲೋಬಲ್ ಬಿಝಿನೆಸ್ ಐಕನ್- 2025ʼ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮತ್ತು ದುಬೈಯ ಭಾರತೀಯ ರಾಯಭಾರಿ ಸತೀಶ್ ಕುಮಾರ್ ಸಿವನ್ ಅವರು ಡಾ. ತುಂಬೆ ಮೊಯ್ದೀನ್ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಯು.ಟಿ. ಖಾದರ್, ಡಾ. ತುಂಬೆ ಮೊಯ್ದಿನ್ ಅವರ ಕೊಡುಗೆಗಳನ್ನು ಶ್ಲಾಘಿಸಿದರು.
"ಡಾ. ತುಂಬೆ ಮೊಯ್ದಿನ್ ಅವರು ವಿಶ್ವದಾದ್ಯಂತ ಉದ್ಯಮಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಆರೋಗ್ಯ, ಶಿಕ್ಷಣ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಅವರ ಸಾಧನೆಯು ಭಾರತೀಯ ಉದ್ಯಮ ಸಮುದಾಯಕ್ಕೆ ಜಾಗತಿಕ ಮನ್ನಣೆಯನ್ನು ತಂದಿದೆ. ಉದ್ಯೋಗ ಮತ್ತು ನಾವೀನ್ಯತೆಯ ಮೂಲಕ ಅವರು ಅಸಂಖ್ಯಾತ ಜನರಿಗೆ ನೆರವಾಗಿದ್ದಾರೆ ಎಂದು ಹೇಳಿದ್ದಾರೆ.
ದುಬೈಯ ಭಾರತೀಯ ರಾಯಭಾರಿ ಸತೀಶ್ ಕುಮಾರ್ ಸಿವನ್ ಮಾತನಾಡಿ, ಡಾ.ಮೊಯ್ದೀನ್ ಅವರು ಬ್ಯಾರಿ ಸಮುದಾಯದ ಆಸ್ತಿಯಾಗಿದ್ದಾರೆ. ಡಾ. ತುಂಬೆ ಮೊಯ್ದಿನ್ ಅವರು ಸಮರ್ಪಣೆಯ ಮೂಲಕ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ವ್ಯಾಪಾರ ವಿಸ್ತರಣೆಗೆ ಹೆಸರುವಾಸಿಯಾಗಿದ್ದಾರೆ. ಅವರು ವ್ಯವಹಾರವನ್ನು ಮೀರಿ ಜನರ ಸಬಲೀಕರಣ, ಸಮುದಾಯಗಳ ಬಲವರ್ಧನೆ, ಭಾರತ-ಯುಎಇ ಸಂಬಂಧಗಳನ್ನು ಬಲಪಡಿಸುವಲ್ಲಿ ಮಹತ್ವದ ಕಾರ್ಯವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಫೆ.9ರಂದು ಯುಎಇಯಲ್ಲಿ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಬಿಸಿಸಿಐ) ಆಶ್ರಯದಲ್ಲಿ ಬ್ಯಾರಿ ಮೇಳ 2025 ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ 10,000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.