'ದುಬೈ ರನ್-2025' | ಲಕ್ಷಾಂತರ ಮಂದಿ ಭಾಗಿ
ದುಬೈ : ಫಿಟ್‌ನೆಸ್(ದೈಹಿಕ ಕ್ಷಮತೆ) ಚಾಲೆಂಜ್‌ನ ಭಾಗವಾಗಿ ರವಿವಾರ ದುಬೈನಲ್ಲಿ ಆಯೋಜಿಸಲಾಗಿದ್ದ ಐತಿಹಾಸಿಕ 'ದುಬೈ ರನ್-2025' ಏಳನೇ ಆವೃತ್ತಿ ಬಹಳ ಅದ್ದೂರಿಯಾಗಿ ನಡೆಯಿತು.
ದುಬೈಯ ಜನನಿಬಿಡ ಪ್ರದೇಶವಾದ ಶೇಖ್ ಝಾಯೆದ್ ರಸ್ತೆಯಲ್ಲಿ ಹಿರಿಯರು, ಕಿರಿಯರು, ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಿತಿಯ ಲಕ್ಷಾಂತರ ಮಂದಿ ಅತೀ ಉತ್ಸಾಹದಿಂದ ಭಾಗವಹಿಸುವ ಮೂಲಕ 'ದುಬೈ ರನ್'ನ ಐತಿಹಾಸಿಕ ಓಟಕ್ಕೆ ಸಾಕ್ಷಿಯಾದರು.
'ದುಬೈ ರನ್'ನಿಂದಾಗಿ ಶೇಖ್ ಝಾಯೆದ್ ರಸ್ತೆ ವಿಶ್ವದ ಅತಿ ದೊಡ್ಡ ಓಟದ ಟ್ರ್ಯಾಕ್(ಮಾರ್ಗ) ಆಗಿ ಮಾರ್ಪಟ್ಟಿತು. ಈ ಉಚಿತ, ಸಾಮೂಹಿಕ ಭಾಗವಹಿಸುವಿಕೆಯ ಕಾರ್ಯಕ್ರಮದಿಂದಾಗಿ ರವಿವಾರ ಸೂರ್ಯೋದಯಕ್ಕೂ ಮುನ್ನವೇ ದುಬೈ ನಗರವಿಡೀ ಹಬ್ಬದ ವಾತಾವರಣದಂತೆ ಕಂಗೊಳಿಸುತ್ತಿತ್ತು. ಫಿಟ್‌ನೆಸ್ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿವರ್ಷ ಆಯೋಜಿಸಲಾಗುತ್ತಿರುವ ಈ ದುಬೈ ರನ್ ನಲ್ಲಿ ಯುಎಇಯಲ್ಲಿ ನೆಲೆಸಿರುವ ವಿಶ್ವದ ನಾನಾ ಕಡೆಗಳ ಜನ ಅತೀ ಉತ್ಸಾಹ ಹಾಗು ಸಂತಸದಿಂದ ಕುಟುಂಬ, ಗೆಳೆಯ, ಗೆಳತಿಯರೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು.
ಹೊಸಬರು, ಮಕ್ಕಳು, ಮಹಿಳೆಯರು ಸೇರಿದಂತೆ ಕುಟುಂಬ ಸಮೇತರಾಗಿ ಪಾಲ್ಗೊಳ್ಳುವ ಜನರು ಸುಲಭವಾಗಿ ಓಡಲು 5 ಕಿ.ಮೀ ಹಾಗು ವೃತ್ತಿಪರ ಅನುಭವಿ ಓಟಗಾರರಿಗೆ 10 ಕಿ.ಮೀ ಓಟವನ್ನು ಆಯೋಜಿಸಲಾಗಿತ್ತು. ಶೇಖ್ ಝಾಯೆದ್ ರಸ್ತೆ ಮತ್ತು ದುಬೈ ಡೌನ್‌ಟೌನ್ ಪ್ರದೇಶವನ್ನು ಓಟಕ್ಕಾಗಿ ಬಳಸಲಾಗಿದ್ದು, ಮ್ಯೂಸಿಯಂ ಆಫ್ ದಿ ಫ್ಯೂಚರ್, ಎಮಿರೇಟ್ಸ್ ಟವರ್ಸ್, ದುಬೈ ಒಪೇರಾ ಮತ್ತು ಬುರ್ಜ್ ಖಲೀಫಾದಂಥ ಐತಿಹಾಸಿಕ ಸ್ಥಳಗಳ ಸುತ್ತ ಓಟಗಾರರು ಓಡುವ ಮೂಲಕ ತಮ್ಮ ಗುರಿ ಮುಟ್ಟಿದರು.
ಕಳೆದ ವರ್ಷ ಈ ಓಟದಲ್ಲಿ 2,78,000 ಜನರು ಭಾಗವಹಿಸಿದ್ದು, ಅದಕ್ಕೂ ಹಿಂದಿನ ಆವೃತ್ತಿಗಿಂತ 23% ಜನರ ಪಾಲ್ಗೊಳ್ಳುವಿಕೆ ಹೆಚ್ಚಳವಾಗಿತ್ತು. ದುಬೈ ರನ್ ವಿಶ್ವದ ಅತಿ ದೊಡ್ಡ ಸಾಮೂಹಿಕ ಓಟ ಎಂಬ ಖ್ಯಾತಿಗೂ ಪಾತ್ರವಾಗಿದೆ.