×
Ad

ಸೌದಿ ಅರೇಬಿಯಾ | 50 ವರ್ಷಗಳಿಂದ ಜಾರಿಯಲ್ಲಿದ್ದ ʼಕಫಾಲಾʼ ವ್ಯವಸ್ಥೆ ರದ್ದು; ವಲಸೆ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಮಹತ್ವದ ಹೆಜ್ಜೆ: ವರದಿ

Update: 2025-10-22 18:23 IST

Photo Credit : @SaudiVision2030

ರಿಯಾದ್ : ಕಾರ್ಮಿಕರನ್ನು ಉದ್ಯೋಗದಾತರು ಸಂಪೂರ್ಣವಾಗಿ ಹಿಡಿತದಲ್ಲಿಟ್ಟುಕೊಳ್ಳಲು ಅವಕಾಶ ನೀಡುವ ʼಕಫಾಲಾʼ ವ್ಯವಸ್ಥೆಯನ್ನು ಸೌದಿ ಅರೇಬಿಯಾ 50 ವರ್ಷಗಳ ಬಳಿಕ ಅಧಿಕೃತವಾಗಿ ರದ್ದುಗೊಳಿಸಿದೆ. 2025ರ ಜೂನ್ ನಲ್ಲೇ ಈ ನಿರ್ಧಾರವನ್ನು ಜಾರಿಗೆ ತರಲಾಗಿದೆ. ಸೌದಿ ಅರೇಬಿಯಾದಲ್ಲಿ ವಲಸಿಗರ ಕಲ್ಯಾಣ ಮತ್ತು ಕಾರ್ಮಿಕರ ಹಕ್ಕುಗಳನ್ನು ಸುಧಾರಿಸುವತ್ತ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು Times of India ವರದಿ ಮಾಡಿದೆ.

ಆದರೆ ಸೌದಿ ಸರಕಾರ ಇದನ್ನು ಅಧಿಕೃತವಾಗಿ ಘೋಷಿಸಿರುವ ಬಗ್ಗೆ ಯಾವುದೇ ಪ್ರಮುಖ ಸೌದಿ ಮಾಧ್ಯಮಗಳು ಈವರೆಗೆ ವರದಿ ಮಾಡಿಲ್ಲ.

ಈ ಸುಧಾರಣೆಯು ಸುಮಾರು 1.3 ಕೋಟಿ ವಲಸೆ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೆಚ್ಚಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಿಂದ ಬಂದವರಿಗೆ ಪ್ರಯೋಜನ ನೀಡಲಿದೆ.

1950ರ ದಶಕದಲ್ಲಿ ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ದೇಶಗಳಲ್ಲಿ ʼಕಫಾಲಾʼ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ʼಕಫಾಲಾʼ ವ್ಯವಸ್ಥೆ ಎಂದರೆ ಅರೇಬಿಕ್ ಭಾಷೆಯಲ್ಲಿ ‘ಪ್ರಾಯೋಜಕತ್ವ’ ಎಂಬ ಅರ್ಥವನ್ನು ಹೊಂದಿದೆ. ಈ ಚೌಕಟ್ಟಿನಡಿಯಲ್ಲಿ ಕಾರ್ಮಿಕರ ಕಾನೂನು ಮಾನ್ಯತೆ ʼಕಫೀಲ್ʼ ಎಂದು ಕರೆಯಲ್ಪಡುವ ಅವರ ಉದ್ಯೋಗದಾತರು ನಿರ್ವಹಿಸುತ್ತಾರೆ. ʼಕಫೀಲ್ʼ ಅನುಮತಿ ಇಲ್ಲದೆ ಕಾರ್ಮಿಕರು ಕೆಲಸ ಬದಲಾಯಿಸಲು, ದೇಶ ತೊರೆಯಲು ಅಥವಾ ಕಾನೂನು ನೆರವು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಕಾರ್ಮಿಕರ ಶೋಷಣೆ, ಹಿಂಸೆ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿತ್ತು.

ಈ ವ್ಯವಸ್ಥೆಯಲ್ಲಿ ವಿದೇಶಿ ಕಾರ್ಮಿಕರ ವೀಸಾ ಮತ್ತು ವಾಸದ ಹೊಣೆಗಾರಿಕೆಯನ್ನು ಸ್ಥಳೀಯ ವ್ಯಕ್ತಿ ಅಥವಾ ಕಂಪೆನಿಗೆ ಅಥವಾ ʼಕಫೀಲ್ʼ ಗೆ ನೀಡಲಾಗುತ್ತಿತ್ತು. ಇದು ಸರಕಾರದ ಮೇಲಿನ ಹೊರೆ ಕಡಿಮೆ ಮಾಡುವ ಗುರಿ ಹೊಂದಿತ್ತು. ಆದರೆ, ಕಾಲಕ್ರಮೇಣ ಈ ವ್ಯವಸ್ಥೆ ಕಠಿಣ ಟೀಕೆಗೆ ಗುರಿಯಾಯಿತು. ಈ ವ್ಯವಸ್ಥೆಯಿಂದಾಗಿ ಅನೇಕ ಕಾರ್ಮಿಕರು ಶೋಷಣೆಗೆ ಒಳಗಾದರು. ಮಾನವ ಹಕ್ಕುಗಳ ಸಂಘಟನೆಗಳು ಇದನ್ನು ಬಲವಂತದ ಕಾರ್ಮಿಕ ಪದ್ಧತಿ ಹಾಗೂ ದಾಸ್ಯಕ್ಕೆ ಸಮಾನ ಪರಿಸ್ಥಿತಿಯೆಂದು ಟೀಕಿಸಿತ್ತು.

ಹೊಸ ನೀತಿಯ ಪ್ರಯೋಜನವೇನು?

ಸೌದಿ ಅರೇಬಿಯಾ ಕಾರ್ಮಿಕ ನೀತಿಗಳ ಸುಧಾರಣೆಯಡಿ ಹಳೆಯ ಕಫಾಲಾ ವ್ಯವಸ್ಥೆಯ ಬದಲಿಗೆ ಹೊಸ ಗುತ್ತಿಗೆ ಆಧಾರಿತ ಉದ್ಯೋಗ ಮಾದರಿ ಜಾರಿಗೆ ತಂದಿದೆ. ಸೌದಿ ಪ್ರೆಸ್ ಏಜೆನ್ಸಿ (SPA) ಮಾಹಿತಿ ಪ್ರಕಾರ, ಈ ಹೊಸ ವ್ಯವಸ್ಥೆಯಲ್ಲಿ ವಿದೇಶಿ ಕಾರ್ಮಿಕರು ಉದ್ಯೋಗದಾತನ ಅನುಮತಿ ಇಲ್ಲದೆ ಕೆಲಸ ಬದಲಾಯಿಸಬಹುದು. ನಿರ್ಗಮನ ವೀಸಾ ಇಲ್ಲದೆ ದೇಶವನ್ನು ತೊರೆಯಬಹುದು ಮತ್ತು ಹಿಂದೆ ನಿರ್ಬಂಧಿತವಾಗಿದ್ದ ಕಾನೂನು ರಕ್ಷಣೆಗಳನ್ನು ಪಡೆಯಬಹುದಾಗಿದೆ.

ಈ ಸುಧಾರಣೆ ಸೌದಿ ಅರೇಬಿಯಾದ ʼವಿಷನ್ 2030ʼ ಉಪಕ್ರಮದ ಭಾಗವಾಗಿದೆ. ದೇಶದ ಆರ್ಥಿಕತೆಯನ್ನು ಸುಧಾರಿಸುವ ಮತ್ತು ವಿದೇಶಿ ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಕಲ್ಯಾಣದ ಗುರಿಯನ್ನು ಹೊಂದಿದೆ. ಮಾನವ ಹಕ್ಕು ಸಂಘಟನೆಗಳು ಈ ಬದಲಾವಣೆಗಳು ಕಾರ್ಮಿಕರಿಗೆ ನಿಜವಾದ ಪ್ರಯೋಜನ ನೀಡಲು ಸರಿಯಾದ ಅನುಷ್ಠಾನ ಮತ್ತು ಮೇಲ್ವಿಚಾರಣೆಯ ತುರ್ತು ಅಗತ್ಯದ ಬಗ್ಗೆ ಹೇಳಿದೆ.

ʼಕಫಾಲಾʼ ವ್ಯವಸ್ಥೆ ಲಕ್ಷಾಂತರ ವಲಸೆ ಕಾರ್ಮಿಕರ ಜೀವನದ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರಿದೆ.

ಸುಮಾರು 1.34 ಕೋಟಿ ವಿದೇಶಿ ಕಾರ್ಮಿಕರು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದು, ಇದು ದೇಶದ ಒಟ್ಟು ಜನಸಂಖ್ಯೆಯ 42% ಆಗಿದೆ. ಹೆಚ್ಚಿನ ಕಾರ್ಮಿಕರು ಬಾಂಗ್ಲಾದೇಶ ಮತ್ತು ಭಾರತದಿಂದ ಸೌದಿ ಅರೇಬಿಯಾಗೆ ತೆರಳಿ ದುಡಿಯುತ್ತಾರೆ. 2023ರಲ್ಲಿ 4.98 ಲಕ್ಷ ಬಾಂಗ್ಲಾದೇಶಿಯರು ಮತ್ತು 4.26 ಲಕ್ಷಕ್ಕಿಂತ ಹೆಚ್ಚು ನೆರೆ ರಾಷ್ಟ್ರಗಳ ಜನರು ಉದ್ಯೋಗಕ್ಕಾಗಿ ಸೌದಿ ಅರೇಬಿಯಾಗೆ ತೆರಳಿದರು. ಸೌದಿ ಅರೇಬಿಯಾದಲ್ಲಿ ಸುಮಾರು 40 ಲಕ್ಷ ಮಂದಿ ಮನೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೆಲ್ಲರೂ ವಿದೇಶಿ ಪ್ರಜೆಗಳಾಗಿದ್ದಾರೆ.

ಸೌದಿ ಅರೇಬಿಯಾದಲ್ಲಿ ವಿದೇಶಿ ಕಾರ್ಮಿಕರು ನಿರ್ಮಾಣ, ಮನೆ ಕೆಲಸ, ಹೋಟೆಲ್ ಮತ್ತು ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಬಹುಮಟ್ಟಿಗೆ ʼಕಫಾಲಾʼ ವ್ಯವಸ್ಥೆಯ ಕಠಿಣ ನಿಯಮಗಳಡಿ ಕೆಲಸ ಮಾಡುತ್ತಿದ್ದರು. ಹೊಸ ವ್ಯವಸ್ಥೆಯು ಕಾರ್ಮಿಕರಿಗೆ ಹೆಚ್ಚಿನ ಘನತೆ ಮತ್ತು ಭದ್ರತೆಯನ್ನು ನೀಡುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News