×
Ad

Saudi Arabia | ಮದೀನಾ ಬಳಿ ಬಸ್ ದುರಂತದಲ್ಲಿ 46 ಪ್ರಯಾಣಿಕರ ಪೈಕಿ ಒಬ್ಬ ಮಾತ್ರ ಪಾರು!

ಅಬ್ದುಲ್ ಶೋಯಿಬ್ ಸಾವಿನ ದವಡೆಯಿಂದ ಪಾರಾಗಿದ್ದು ಹೇಗೆ?

Update: 2025-11-18 20:11 IST

ಅಬ್ದುಲ್ ಶೋಯಿಬ್ | Photo Credit : X

 ಮದೀನಾ: ಸೌದಿ ಅರೇಬಿಯದ ಮದೀನಾ ಸಮೀಪ ಸೋಮವಾರ ನಡೆದ ಭೀಕರ ಬಸ್ ಅಪಘಾತದಲ್ಲಿ 45 ಭಾರತೀಯ ಯಾತ್ರಿಕರು ಮೃತಪಟ್ಟಿದ್ದಾರೆ. ಉಮ್ರಾ ಯಾತ್ರೆಯ ಬಳಿಕ ಮಕ್ಕಾದಿಂದ ಮದೀನಾಗೆ ಹೊರಟಿದ್ದ ಭಾರತೀಯ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಕ್ಷಣಾರ್ಧದಲ್ಲಿ ಬೆಂಕಿಗಾಹುತಿಯಾದ್ದರಿಂದ, ಬಸ್‌ನಲ್ಲಿದ್ದ 46 ಪ್ರಯಾಣಿಕರಲ್ಲಿ 45 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬದುಕುಳಿದ ಏಕೈಕ ವ್ಯಕ್ತಿ ತೆಲಂಗಾಣ ಮೂಲದ 24 ವರ್ಷದ ಮುಹಮ್ಮದ್ ಅಬ್ದುಲ್ ಶೋಯೆಬ್ ಪ್ರಸ್ತುತ ಮದೀನಾದ ಜರ್ಮನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್‌ನಲ್ಲಿ ಹಿಂಭಾಗದಲ್ಲಿ ಕುಳಿತಿದ್ದ ಶೋಯೆಬ್ ಚಾಲಕನೊಂದಿಗೆ ಮಾತನಾಡಲು ಕೆಲವೇ ನಿಮಿಷಗಳ ಮೊದಲು ಚಾಲಕನ ಪಕ್ಕದ ಆಸನಕ್ಕೆ ಬದಲಾಯಿಸಿದ್ದರು. ಈ ಸಣ್ಣ ನಿರ್ಧಾರವೇ ಅವರ ಜೀವ ಉಳಿಸಿತು ಎಂದು NDTV ವರದಿ ಮಾಡಿದೆ.

ಬಸ್ ಟ್ಯಾಂಕರ್‌ಗೆ ಡಿಕ್ಕಿಯಾಗುತ್ತಿದ್ದಂತೆ ಒಮ್ಮೆಲೇ ಬೆಂಕಿ ಹರಡಿತು ಎನ್ನಲಾಗಿದೆ. ಕೂಡಲೇ ಚಾಲಕ ಮತ್ತು ಶೋಯೆಬ್ ಕಿಟಕಿಯಿಂದ ಹೊರಗೆ ಜಿಗಿಯಲು ಯಶಸ್ವಿಯಾಗಿದ್ದಾರೆ. ಉಳಿದವರಿಗೆ ಯಾವುದೇ ಪ್ರತಿಕ್ರಿಯಿಸುವ ಅವಕಾಶವೇ ಸಿಗಲಿಲ್ಲ ಎಂದು ತಿಳಿದು ಬಂದಿದೆ.

“ಬೆಳಿಗ್ಗೆ 5.30ರ ಸುಮಾರಿಗೆ ಶೋಯೆಬ್ ಕರೆ ಮಾಡಿ, ಅವರು ಪಾರಾಗಿದ್ದಾರೆ ಮತ್ತು ಉಳಿದವರೆಲ್ಲರೂ ಬೆಂಕಿಯಲ್ಲಿ ಸಿಲುಕಿದ್ದಾರೆ ಎಂದು ಮಾಹಿತಿ ನೀಡಿದರು,” ಎಂದು ಅವರ ಸಂಬಂಧಿ ಮುಹಮ್ಮದ್ ತೆಹ್ಸೀನ್ Hindustan Times ಗೆ ತಿಳಿಸಿದ್ದಾರೆ.

ಶೋಯೆಬ್ ತಮ್ಮ ಪೋಷಕರಾದ ಅಬ್ದುಲ್ ಖಾದಿರ್ (56), ಗೌಸಿಯಾ ಬೇಗಂ (46) ಮತ್ತು ಅಜ್ಜ ಮುಹಮ್ಮದ್ ಮೌಲಾನಾ ಹಾಗೂ ಚಿಕ್ಕಪ್ಪನ ಕುಟುಂಬದ ಮೂವರು ಸದಸ್ಯರೊಂದಿಗೆ ಉಮ್ರಾ ಯಾತ್ರೆಗೆ ತೆರಳಿದ್ದರು. ಈ ಆರು ಜನರೂ ಈ ದುರಂತದಲ್ಲಿ ಮೃತಪಟ್ಟಿದ್ದಾರೆ.

“ಅಪಘಾತದ ನಂತರ ಶೋಯೆಬ್ ಮಕ್ಕಾದಲ್ಲಿದ್ದ ಪರಿಚಿತನಿಗೆ ಕರೆ ಮಾಡಿದ್ದರು. ಕುಟುಂಬದ ಯಾರೂ ಬದುಕಿಲ್ಲ ಎಂದು ಹೇಳಿದಾಗ ನಾವು ಬೆಚ್ಚಿಬಿದ್ದೆವು,” ಎಂದು ತೆಹ್ಸೀನ್ ಭಾವುಕರಾದರು.

ಘಟನೆ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ತೀವ್ರ ಆಘಾತ ವ್ಯಕ್ತಪಡಿಸಿದ್ದು, ರಿಯಾದ್ ರಾಯಭಾರ ಕಚೇರಿ ಮತ್ತು ಜೆಡ್ಡಾದ ಕಾನ್ಸುಲೇಟ್ ಅಗತ್ಯ ಸಹಾಯ ಒದಗಿಸುತ್ತಿವೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ, ಗಾಯಗೊಂಡ ಶೋಯೆಬ್ ಅವರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಘಟನೆಯಲ್ಲಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿರುವ ತೆಲಂಗಾಣ ಸರಕಾರ, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಹಮ್ಮದ್ ಅಝರುದ್ದೀನ್ ನೇತೃತ್ವದಲ್ಲಿ ಅಧಿಕೃತ ನಿಯೋಗವನ್ನು ಸೌದಿ ಅರೇಬಿಯಾಗೆ ಕಳುಹಿಸಲು ತೀರ್ಮಾನಿಸಿದೆ.

ಮೃತರ ಇಬ್ಬರು ಕುಟುಂಬದ ಸದಸ್ಯರು ಸೌದಿ ಅರೇಬಿಯಾಗೆ ಪ್ರಯಾಣಿಸಲು ಸರಕಾರ ನೆರವಿನ ವ್ಯವಸ್ಥೆ ಮಾಡಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News