ಸೌದಿ ಅರೇಬಿಯಾದ ಗ್ರ್ಯಾಂಡ್ ಮುಫ್ತಿ ಶೇಖ್ ಅಬ್ದುಲ್ ಅಝೀಝ್ ಅಲ್ ಶೇಖ್ ನಿಧನ
ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಬಿನ್ ಮುಹಮ್ಮದ್ ಅಲ್-ಶೇಖ್ | PC : X \ @insharifain
ರಿಯಾದ್: ಸೌದಿ ಅರೇಬಿಯಾದ ಗ್ರ್ಯಾಂಡ್ ಮುಫ್ತಿ ಹಾಗೂ ಹಿರಿಯ ವಿದ್ವಾಂಸರ ಮಂಡಳಿಯ ಮುಖ್ಯಸ್ಥ ಶೇಖ್ ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಬಿನ್ ಮುಹಮ್ಮದ್ ಅಲ್-ಶೇಖ್ ನಿಧನರಾಗಿದ್ದಾರೆ ಎಂದು ಸೌದಿ ಸುದ್ದಿ ಸಂಸ್ಥೆ (SPA) ಮಂಗಳವಾರ ರಾಯಲ್ ದಿವಾನ್ ಪ್ರಕಟನೆಯನ್ನು ಉಲ್ಲೇಖಿಸಿ ದೃಢಪಡಿಸಿದೆ.
ಸೌದಿ ಅರೇಬಿಯಾ ಪರವಾಗಿ ಹೊರಡಿಸಿದ ಹೇಳಿಕೆಯಲ್ಲಿ, “ಅವರ ನಿಧನದಿಂದ ಸೌದಿ ಅರೇಬಿಯಾ ಮಾತ್ರವಲ್ಲ, ಇಡೀ ಇಸ್ಲಾಮಿಕ್ ಜಗತ್ತು ಜ್ಞಾನ, ಧರ್ಮ ಮತ್ತು ಮುಸ್ಲಿಂ ಸಮುದಾಯದ ಸೇವೆಗೆ ಮಹತ್ತರ ಕೊಡುಗೆ ನೀಡಿದ ಮಹಾನ್ ವಿದ್ವಾಂಸರೊಬ್ಬರನ್ನು ಕಳೆದುಕೊಂಡಿದೆ” ಎಂದು ಸಂತಾಪ ಸೂಚಿಸಲಾಗಿದೆ.
ಶೇಖ್ ಅಬ್ದುಲ್ ಅಝೀಝ್ ಅವರು ವಿದ್ವಾಂಸರಾಗಿ ಸಂಶೋಧನೆ ಮತ್ತು ಇಫ್ತಾದ ಜನರಲ್ ಅಧ್ಯಕ್ಷರಾಗಿಯೂ, ಮುಸ್ಲಿಂ ವರ್ಲ್ಡ್ ಲೀಗ್ ನ ಸುಪ್ರೀಂ ಕೌನ್ಸಿಲ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 1999ರಲ್ಲಿ ಗ್ರ್ಯಾಂಡ್ ಮುಫ್ತಿ ಅಬ್ದುಲ್ ಅಝೀಝ್ ಬಿನ್ ಬಾಝ್ ಅವರ ನಿಧನದ ನಂತರ, ಶೇಖ್ ಅಬ್ದುಲ್ ಅಝೀಝ್ ಅಲ್ ಶೇಖ್ ದೇಶದ ಅತ್ಯುನ್ನತ ಧಾರ್ಮಿಕ ಹುದ್ದೆಯನ್ನು ವಹಿಸಿಕೊಂಡಿದ್ದರು.
ಅಂತ್ಯಕ್ರಿಯೆಯ ನಮಾಝ್ ಅಸರ್ ಪ್ರಾರ್ಥನೆಯ ಬಳಿಕ (ಸೌದಿ ಸಮಯ ಮಧ್ಯಾಹ್ನ 3.12) ರಿಯಾದ್‌ನ ಇಮಾಮ್ ತುರ್ಕಿ ಬಿನ್ ಅಬ್ದುಲ್ಲಾ ಮಸೀದಿಯಲ್ಲಿ ನೆರವೇರಲಿದೆ. ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅವರು ಮಕ್ಕಾದ ಗ್ರ್ಯಾಂಡ್ ಮಸೀದಿ, ಮದೀನಾದ ಪ್ರವಾದಿ ಮಸೀದಿ ಹಾಗೂ ದೇಶದಾದ್ಯಂತದ ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ನೆರವೇರಿಸುವಂತೆ ಆದೇಶಿಸಿದ್ದಾರೆ.
ಶೇಖ್ ಅಬ್ದುಲ್ ಅಝೀಝ್ ಅವರ ಕುಟುಂಬಕ್ಕೆ, ಸೌದಿ ನಾಗರಿಕರಿಗೆ ಮತ್ತು ಇಡೀ ಮುಸ್ಲಿಂ ಸಮುದಾಯಕ್ಕೆ ರಾಜ ಸಲ್ಮಾನ್ ಹಾಗೂ ಕ್ರೌನ್ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ತಮ್ಮ ಸಂತಾಪವನ್ನು ತಿಳಿಸಿದ್ದಾರೆ.