ಬೇಲೂರು: ಆಕಸ್ಮಿಕ ಬೆಂಕಿ ಅವಘಡಕ್ಕೆ ಹೊತ್ತಿ ಉರಿದ ಹಾರ್ಡವೇರ್ ಅಂಗಡಿ
ಹಾಸನ: ಬೇಲೂರು ತಾಲೂಕಿನ ಬಿಕ್ಕೋಡು ಪಟ್ಟಣದ ಮುಖ್ಯ ರಸ್ತೆಯಲ್ಲಿ ಇರುವ ರಂಗಸ್ವಾಮಿ ಎಂಬವರ ಮಾಲಕತ್ವದ ಬಾಲಾಜಿ ಹಾರ್ಡ್ ವೇರ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಲಕ್ಷಾಂತರ ರೂ. ಮೌಲ್ಯದ ಇಲೆಕ್ಟ್ರಿಕಲ್, ಹಾರ್ದ ವೇರ್ ಹಾಗೂ ಇತರ ಕೃಷಿ ಸಂಬಂಧಿತ ಪರಿಕರಗಳ ಸುಟ್ಟು ಕರಕಲಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ರಂಗಸ್ವಾಮಿ ಗುರುವಾರ ರಾತ್ರಿ 8ರ ಸುಮಾರಿಗೆ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದರು. 8:30ರ ಸುಮಾರಿಗೆ ಅಂಗಡಿಯ ಒಳಗಿನಿಂದ ದಟ್ಟ ಹೊಗೆ ಕಾಣಿಸಿಕೊಂಡದ್ದನ್ನು ಗಮನಿಸಿದ ನೆರೆ ಹೊರೆಯ ಅಂಗಡಿಯವರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಹಾರ್ಡ್ ವೇರ್ ಅಂಗಡಿಯ ಬಾಗಿಲು ಒಡೆದು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆ ವೇಳೆಗಾಗಲೇ ಅಗ್ನಿಶಾಮಕ ದಳದ ವಾಹನ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ, ಸಕಾಲದಲ್ಲಿ ಬೆಂಕಿ ನಂದಿಸಿರುವುದರಿಂದ ಅಕ್ಕ ಪಕ್ಕದಲ್ಲಿರುವ ಬಟ್ಟೆ ಹಾಗೂ ಹಾರ್ಡ್ ವೇರ್ ಅಂಗಡಿ ಮುಗ್ಗಟುಗಳು ಸುರಕ್ಷಿತ ವಾಗಿದ್ದು, ಹೆಚ್ಚಿನ ಅಪಾಯ ತಪ್ಪಿದಂತಾಗಿದೆ.