ಬೇಲೂರು | ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ; ಇಬ್ಬರ ಮೃತ್ಯು
ಸಾಂದರ್ಭಿಕ ಚಿತ್ರ
ಬೇಲೂರು : ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಮತ್ತುಗನ್ನೆ ಗ್ರಾಮದ ಸಮೀಪ ಸಂಭವಿಸಿರುವುದು ವರದಿಯಾಗಿದೆ.
ತಾಲೂಕಿನ ಹೊಸಮನಹಳ್ಳಿ ಗ್ರಾಮದ ಲೋಕೇಶ್ (25) ಹಾಗೂ ಅವರ ಸಹೋದರ ಸಂಬಂಧಿ ಚಿಕ್ಕಮಗಳೂರಿನ ರಾಮೇನಹಳ್ಳಿಯ ಕಿರಣ್ (32) ಮೃತಪಟ್ಟವರೆಂದು ಗುರುತಿಸಲಾಗಿದೆ.
ಲೊಕೇಶ್ ಮತ್ತು ಕಿರಣ್ ತನ್ನ ತಂಗಿಯ ಆರತಕ್ಷತೆ ಇದ್ದ ಹಿನ್ನೆಲೆಯಲ್ಲಿ ನಡುರಾತ್ರಿ ಬೈಕ್‌ನಲ್ಲಿ ಮದುವೆಗೆ ಮೊಸರು ತರಲು ಬೇಲೂರಿಗೆ ಆಗಮಿಸುತ್ತಿದ್ದರು. ಮತ್ತುಗನ್ನೆ ಗ್ರಾಮದ ಸಮೀಪ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಕ್ಕದ ಚರಂಡಿಗೆ ಬಿದ್ದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಚಿಕ್ಕಮಗಳೂರು ರಸ್ತೆಯ ಭಾಗದಲ್ಲಿ ಬೈಕ್ ಅನಾಥವಾಗಿ ಬಿದ್ದಿದ್ದನ್ನು ಸ್ಥಳೀಯರು ಗಮನಿಸಿದಾಗ ಸುಮಾರು 10 ಅಡಿ ದೂರದಲ್ಲಿ ಲೊಕೇಶ್ ಹಾಗೂ ಕಿರಣ್ ಅವರ ಮೃತದೇಹ ಬಿದ್ದಿದ್ದವು. ಕೂಡಲೇ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಿಐ ರೇವಣ್ಣ ಹಾಗೂ ಪಿಎಸ್‌ಐ ಎಸ್.ಜಿ ಪಾಟೀಲ್ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.