ಅರಕಲಗೂಡು | ಪತಿ-ಅತ್ತೆಯಿಂದ ಕಿರುಕುಳ ಆರೋಪ; ವೀಡಿಯೊ ಮಾಡಿ ಮಗುವಿನೊಂದಿಗೆ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ
ಅರಕಲಗೂಡು : ಪತಿ ಮತ್ತು ಅತ್ತೆಯ ಕಿರುಕುಳದಿಂದ ಮನನೊಂದು ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ತಾಲೂಕಿನ ರಾಮನಾಥಪುರ ಬಳಿಯ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಮೂಲತಃ ಮೈಸೂರು ಜಿಲ್ಲೆ ಸಾಲಿಗ್ರಾಮ ಮೂಲದ ಮಹಾದೇವಿ(29) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮನೆಯವರ ಕಿರುಕುಳದಿಂದ ಬೇಸತ್ತು ತಾಯಿ-ಮಗು ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಾಲೂಕಿನ ಬೆಟ್ಟಸೋಗೆ ಬಳಿ ಎರಡೂ ಮೃತದೇಹಗಳು ಪತ್ತೆಯಾಗಿವೆ. ಮಹಾದೇವಿ ಮೂರು ವರ್ಷಗಳ ಹಿಂದೆ ಸೀಬಿಹಳ್ಳಿ ಗ್ರಾಮದ ಕುಮಾರ್ ಎಂಬುವನನ್ನ ಮದುವೆಯಾಗಿದ್ದರು. ಮೊದಲ ಮದುವೆಯಾಗಿ ವಿಚ್ಚೇದನ ಪಡೆದಿದ ಮಹಾದೇವಿ ನಂತರ ಕುಮಾರ್ ನೊಂದಿಗೆ ಎರಡನೇ ಮದುವೆ ಆಗಿದ್ದರು. ಸಾಯುವ ಮುನ್ನ ವೀಡಿಯೊ ಮಾಡಿರುವ ತಾಯಿ, ಕಣ್ಣೀರು ಇಡುತ್ತಲೇ ತನಗೆ ಆಗುತ್ತಿರುವ ನೋವನ್ನು ಮಗುವನ್ನು ಎತ್ತಿಕೊಂಡೇ ಎಳೆ ಎಳೆಯಾಗಿ ಪತಿ ಹಾಗೂ ಅತ್ತೆಯಿಂದ ಕಿರುಕುಳಗಳ ಬಗ್ಗೆ ವಿವರಿಸಿದ್ದಾರೆ. ಇದಲ್ಲದೆ ಡೆತ್‌ನೋಟ್ ಸಹ ಬರೆದಿರುವ ಮಹಾದೇವಿ, ಮದುವೆ ಆದಾಗಿನಿಂದಲೂ ಕಿರುಕುಳ ಕೊಡುತ್ತಿದ್ದ ಗಂಡನ ನಡತೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದಾಗಿ ಬರೆದಿದ್ದಾರೆ ಎನ್ನಲಾಗಿದೆ. ಒಂದೆಡೆ ಪತಿ ಹಾಗೂ ಆಕೆಯ ತಾಯಿಯ ಕಿರುಕುಳ ಮತ್ತೊಂದೆಡೆ ಪೊಲೀಸರ ನಿರ್ಲಕ್ಷ್ಯವೇ ಮಗಳ ಸಾವಿಗೆ ಕಾರಣವೆಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಈ ಸಂಬಂಧ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.