HASSAN | ಚನ್ನರಾಯಪಟ್ಟಣದಲ್ಲಿ ಸರಣಿ ಅಪಘಾತ: ಓರ್ವ ಮೃತ್ಯು; ಇಬ್ಬರಿಗೆ ಗಾಯ
ಚನ್ನರಾಯಪಟ್ಟಣ: ಕಾರು, ಖಾಸಗಿ ಬಸ್ ಮತ್ತು ಸ್ಕೂಟರ್ ಮಧ್ಯೆ ಸಂಭವಿಸಿದ ಸರಣಿ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಹಿರೀಸಾವೆ ಬಳಿ ರಾಷ್ಟ್ರೀಯ ಹೆದ್ದಾರಿ 75ರ ಅಂಬೇಡ್ಕರ್ ವೃತ್ತದ ಸಮೀಪ ರವಿವಾರ ಸಂಜೆ ನಡೆದಿದೆ.
ಮೃತರನ್ನು ಸ್ಕೂಟರ್ ಸವಾರ, ಮಸಕನಳ್ಳಿ ಗ್ರಾಮದ ನಿವಾಸಿ ಎಂ.ಸಿ.ದೇವರಾಜ್(54) ಎಂದು ಗುರುತಿಸಲಾಗಿದೆ.
ರವಿವಾರ ಸಂಜೆ 7 ಗಂಟೆ ಸುಮಾರಿಗೆ ಹಾಸನ ಕಡೆಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಅತಿ ವೇಗವಾಗಿ ಬಂದು ಕಾರೊಂದಕ್ಕೆ ಢಿಕ್ಕಿ ಹೊಡೆದು ಬಳಿಕ ಸರ್ವಿಸ್ ರಸ್ತೆಗೆ ನುಗ್ಗಿದ್ದಲ್ಲದೆ, ದೇವರಾಜ್ ಸಂಚರಿಸುತ್ತಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆದು ಉರುಳಿಬಿದ್ದಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ದೇವರಾಜ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆ ವೇಳೆ ಬಸ್ಸಿನಲ್ಲಿ ಚಾಲಕ, ನಿರ್ವಾಹಕ ಹೊರತುಪಡಿಸಿ, ಯಾವುದೇ ಪ್ರಯಾಣಿಕರು ಇಲ್ಲದಿದ್ದ ಕಾರಣ ಭಾರೀ ಅಪಾಯ ತಪ್ಪಿದೆ. ಚಾಲಕ, ನಿರ್ವಾಹಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ದೇವರಾಜ್ ತಮ್ಮ ಗ್ರಾಮಕ್ಕೆ ಹಿಂದಿರುಗಲು ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಸರ್ವಿಸ್ ರಸ್ತೆಯಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದರು.
ಈ ಬಗ್ಗೆ ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.