ಅರಕಲಗೂಡು | ಹಸು ಮಾರಿ ಡಿಡಿ ಪಾವತಿಸಿದ ಆರ್‌ಟಿಐ ಕಾರ್ಯಕರ್ತ : ದಾಖಲೆಗಳನ್ನು ಎತ್ತಿನಗಾಡಿಯಲ್ಲಿ ಸಾಗಾಟ
ಅರಕಲಗೂಡು, ನ.21: ತಾಲೂಕಿನ ರಾಮನಾಥಪುರ ಹೋಬಳಿ ಕಾಳೆನಹಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಆರ್‌ಟಿಐ ಕಾರ್ಯಕರ್ತನೋರ್ವ ಮಾಹಿತಿ ಹಕ್ಕಿನ ಅಡಿಯಲ್ಲಿ ದಾಖಲೆಗಳನ್ನು ಪಡೆಯಲು ತನ್ನ ಹಸು ಮಾರಿ ಪಾವತಿಸಿ ಎತ್ತಿನಗಾಡಿಯಲ್ಲಿ ಸಾಗಿಸಿರುವ ಘಟನೆ ನಡೆದಿದೆ.
ಬಸವನಹಳ್ಳಿ ಗ್ರಾಮದ ರವಿ ಬಿ.ಎಸ್ ಅವರು ಸೆ.29ರಂದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಹಲವು ದಾಖಲೆಗಳನ್ನು ಕೇಳಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಪರಿಶೀಲಿಸಿದ ನಂತರ ಗ್ರಾಮ ಪಂಚಾಯತ್ ಒಟ್ಟು 32,340 ರೂ. ಪಾವತಿಸಬೇಕು ಎಂದು ರವಿಗೆ ತಿಳಿಸಿತು. ನಂತರ ಗ್ರಾಮ ಪಂಚಾಯತ್ 16,370 ಪುಟಗಳ ಪ್ರತಿಗಳನ್ನು ಅಂಚೆ ಕಚೇರಿಯ ಮೂಲಕ ರವಿಗೆ ಕಳುಹಿಸಿತು.ದಾಖಲೆಗಳನ್ನು ಪಡೆಯಲು ರವಿ ತನ್ನ ಹಸುವನ್ನು ಮಾರಾಟ ಮಾಡಿ ಸ್ನೇಹಿತರ ಬಳಿ ಸಾಲ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದಾಖಲೆಗಳ ಪ್ರಮಾಣ ಅಷ್ಟು ದೊಡ್ಡದಾಗಿದ್ದರಿಂದ, ರವಿ ಅವರು ಎತ್ತಿನಗಾಡಿ ಬಳಸಿಕೊಂಡು ದಾಖಲೆಗಳನ್ನು ಮನೆಗೆ ತೆಗೆದುಕೊಂಡು ಹೊಗಿದ್ದಾರೆ.
ಅರ್ಜಿಯನ್ನು ಹಿಂತೆಗೆದುಕೊಳ್ಳಲು ಒತ್ತಡ, ಆಮಿಷ :
ರವಿಯವರ ಹೇಳಿಕೆಯ ಪ್ರಕಾರ, ಕೆಲವು ವ್ಯಕ್ತಿಗಳು ಅರ್ಜಿಯನ್ನು ಹಿಂತೆಗೆದುಕೊಳ್ಳಲು ಒತ್ತಡ ಹಾಕಿದ್ದುಷ್ಟೆ ಅಲ್ಲ, ‘‘ನಿಮಗೆ ಬೇಕಾದ ಸೌಲಭ್ಯ ಮಾಡಿಸುತ್ತೇವೆ’’ ಎಂದು ಆಮಿಷಗಳನ್ನೂ ನೀಡಿರುವುದಾಗಿ ಆರೋಪಿಸಿದ್ದಾರೆ.