ಹಾಸನ | ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ದಂಪತಿ ನೀರುಪಾಲು
Update: 2025-11-24 22:43 IST
ಹಾಸನ : ಬಟ್ಟೆ ತೊಳೆಯಲು ನಾಲೆಗೆ ಹೋಗಿದ್ದ ದಂಪತಿ ನೀರಿಗೆ ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗೋಪಾಲ್ (27) ಹಾಗೂ ಅವರ ಪತ್ನಿ ದೀಪು (24) ಎಂದು ಗುರುತಿಸಲಾಗಿದೆ. ರವಿವಾರ ಮಧ್ಯಾಹ್ನ ದಂಪತಿ ಹೇಮಾವತಿ ನಾಲೆಗೆ ಬಟ್ಟೆ ತೊಳೆಯಲು ತೆರಳಿದ್ದರು.
ಬಟ್ಟೆ ತೊಳೆಯುವ ವೇಳೆ ದೀಪು ಕಾಲು ಜಾರಿ ನಾಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಪತ್ನಿಯನ್ನು ರಕ್ಷಿಸಲು ಗೋಪಾಲ್ ನಾಲೆಗೆ ಇಳಿದರೂ ನಾಲೆಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದ ಕಾರಣ ಇಬ್ಬರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಮನೆಗೆ ಮರಳದ ದಂಪತಿಯನ್ನು ಕುಟುಂಬಸ್ಥರು ಹುಡುಕಾಟ ನಡೆಸಿದಾಗ ನಾಲೆಯ ದಡದಲ್ಲಿ ಬಟ್ಟೆಗಳು ಪತ್ತೆಯಾದವು. ತಕ್ಷಣವೇ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆಯ ಕುರಿತು ಚನ್ನರಾಯಪಟ್ಟಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.