×
Ad

ಬೇಲೂರು ಗಣೇಶ ಮೂರ್ತಿಗೆ ಚಪ್ಪಲಿ ಹಾರ ಪ್ರಕರಣ | ಮಧ್ಯಾಹ್ನ 12:30ರೊಳಗೆ ಮಾಹಿತಿ : ಸ್ಥಳೀಯರಿಗೆ ಪೊಲೀಸ್ ಭರವಸೆ

ಅಪರಿಚಿತ ಮಹಿಳೆ ಕೃತ್ಯ ಎಸಗಿರುವ ಅನುಮಾನ

Update: 2025-09-21 11:55 IST

ಹಾಸನ: ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಪುರಸಭೆ ಆವರಣದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಾಲಯದ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಅವಮಾನಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಇಂದು(ಸೆ.21) ಮಧ್ಯಾಹ್ನ 12:30ರೊಳಗೆ ಮಾಹಿತಿ ನೀಡುವುದಾಗಿ ಪೊಲೀಸರು ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದಾರೆ.

ಪ್ರತಿದಿನ ಪೂಜೆ ನಡೆಯುವ ಈ ಗಣಪತಿಗೆ ಇಂದು ಬೆಳಿಗ್ಗೆ ಭಕ್ತಾಧಿಗಳು ಕೈಮುಗಿಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ವ್ಯಾಪಾರಿಗಳು ದೇವರ ಪೂಜೆ ಬಳಿಕ ವ್ಯವಹಾರ ಆರಂಭಿಸುವುದು ರೂಢಿಯಾಗಿದ್ದು, ಕಿಡಿಗೇಡಿಗಳ ಈ ಕೃತ್ಯವನ್ನು ಕಂಡು ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ದೇವಾಲಯದ ಗೇಟ್ ತೆರೆದು ಒಳನುಗ್ಗಿ ಅವಮಾನ ಮಾಡಿದ್ದಾರೆ ಎನ್ನಲಾಗಿದೆ. ಮಾಹಿತಿ ದೊರಕುತ್ತಿದ್ದಂತೆಯೇ ಬೇಲೂರು ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಈ ಘಟನೆ ಪಟ್ಟಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಭಕ್ತರು ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಅಪರಿಚಿತ ಮಹಿಳೆ ಕೃತ್ಯ ಎಸಗಿರುವ ಅನುಮಾನ :

ಘಟನೆಯ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳಲ್ಲಿ ಮಹಿಳೆಯೊಬ್ಬಳು ದೇವಸ್ಥಾನದ ಬಳಿ ತಿರುಗಾಡುತ್ತಿರುವುದು ಪತ್ತೆಯಾಗಿದೆ. ಈ ಮಹಿಳೆಯೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಮುಹಮ್ಮದ್ ಸುಜಿತಾ ಅವರು ಸ್ಥಳೀಯ ಶಾಸಕ ಎಚ್.ಕೆ. ಸುರೇಶ್ ಸಮ್ಮುಖದಲ್ಲಿ ಮಾತನಾಡಿ, "ಮಧ್ಯಾಹ್ನ 12:30ಕ್ಕೆ ಆರೋಪಿಗಳ ಕುರಿತು ಮಾಹಿತಿ ನೀಡಲಾಗುವುದು" ಎಂದು ಸ್ಪಷ್ಟಪಡಿಸಿದ್ದಾರೆ.

ಶಾಸಕ ಎಚ್.ಕೆ. ಸುರೇಶ್ ಕೂಡಾ ಸಾರ್ವಜನಿಕರಿಗೆ ಮಾಹಿತಿ ಹಂಚಿಕೊಂಡು, ಭಕ್ತರ ಭಾವನೆಗಳಿಗೆ ಧಕ್ಕೆ ತರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News