ಬೇಲೂರು | ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಮೇಲೆ ಬೀದಿ ನಾಯಿಗಳ ದಾಳಿ
Update: 2025-10-07 12:55 IST
ಬೇಲೂರು: ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ತಾಲ್ಲೂಕಿನ ಹಳೇ ಗೆಂಡೆಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಗೆಂಡೆಹಳ್ಳಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕಿ ಲುಕ್ನಾ ಅವರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗಾಗಿ ಸ್ಕೂಟಿಯಲ್ಲಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಸ್ಕೂಟಿ ನಿಲ್ಲಿಸಲು ಯತ್ನಿಸುತ್ತಿದ್ದ ಸಮಯದಲ್ಲಿ ಅಕಸ್ಮಿಕವಾಗಿ ಬೀದಿ ನಾಯಿಗಳು ದಾಳಿ ನಡೆಸಿದ್ದು, ಅವರು ಕಾಲು ಮತ್ತು ಕೈ ಭಾಗದಲ್ಲಿ ಗಾಯವಾಗಿದ್ದು, ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಾಮದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಭಯಭೀತರಾಗಿದ್ದು, ಗ್ರಾಮಸ್ಥರು ಪಂಚಾಯತ್ ಹಾಗೂ ಪಶುವೈದ್ಯ ಇಲಾಖೆ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.