ಹಾಸನ: ಆಸ್ತಿ ವಿಚಾರದಲ್ಲಿ ಜಗಳ; ತಂದೆ, ಸಹೋದರನ ಕೊಲೆಯಲ್ಲಿ ಅಂತ್ಯ
Update: 2025-07-10 09:55 IST
ಹಾಸನ: ಆಸ್ತಿ ವಿಚಾರಕ್ಕಾಗಿ ವ್ಯಕ್ತಿಯೊಬ್ಬ ತನ್ನ ತಂದೆ ಹಾಗೂ ಅಣ್ಣನನ್ನೇ ಕೊಲೆಗೈದ ಆಘಾತಕಾರಿ ಘಟನೆ ಹೊಳೆನರಸೀಪುರ ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿರುವ ಬಗ್ಗೆ ಗುರುವಾರ ವರದಿಯಾಗಿದೆ.
ತಂದೆ ದೇವೇಗೌಡ (70) ಹಾಗೂ ಅಣ್ಣ ಮಂಜುನಾಥ್ (50) ಅವರನ್ನು, ಕುಡಿದ ಮತ್ತಿನಲ್ಲಿದ್ದ ಮೋಹನ್ (47) ಎಂಬಾತ ತಲೆಗೆ ಮಚ್ಚಿನಿಂದ ಕಡಿದು ಪರಾರಿಯಾಗಿದ್ದಾನೆ.
ಮಂಜುನಾಥ್ ಹಾಗೂ ಮೋಹನ್ ಇಬ್ಬರೂ ಅವಿವಾಹಿತರಾಗಿದ್ದು, ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮಂಜುನಾಥ್ ತಂದೆ-ತಾಯಿಯ ಜೊತೆಗಿದ್ದರೆ, ಮೋಹನ್ ಬೇರೆಡೆ ವಾಸವಿದ್ದ. ಪೊಲೀಸರ ತನಿಖೆಯ ಪ್ರಕಾರ, ಆಸ್ತಿ ವಿವಾದವೇ ಈ ಘೋರ ಕೃತ್ಯಕ್ಕೆ ಕಾರಣವಿರಬಹುದೆಂದು ಶಂಕಿಸಲಾಗಿದೆ.
ಕೊಲೆಯಾದ ದೇವೇಗೌಡ ಹಾಗೂ ಮಂಜುನಾಥ್‌ರ ಶವಗಳನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ತನಿಖೆ ಮುಂದುವರಿದಿದೆ