×
Ad

ಹಾಸನ | ಆಟೋ ಮೇಲೆ ಕಾಡಾನೆಗಳ ದಾಳಿ ; ಇಬ್ಬರು ಪ್ರಾಣಾಪಾಯದಿಂದ ಪಾರು

Update: 2024-04-25 15:24 IST

ಅರೇಹಳ್ಳಿ : ಬೆಳ್ಳಂಬೆಳಗ್ಗೆ ಕಾಡಾನೆಗಳ ಹಿಂಡು ದಾಳಿ ಮಾಡಿದ ಪರಿಣಾಮ ಆಟೋ ರಿಕ್ಷಾವೊಂದು ಜಖಂ ಗೊಂಡು ಚಾಲಕ ಹಾಗೂ ಪ್ರಯಾಣಿಕ ಮಹಿಳೆ ಗಾಯಗೊಂಡ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಗುಜ್ಜನಹಳ್ಳಿ ತಿರುವಿನ ಮಿಷನ್ ಕಾಡಿನ ಬಳಿ ನಡೆದಿರುವುದಾಗಿ ವರದಿಯಾಗಿದೆ.

ಆಟೋ ಚಾಲಕ ಮೋಹನ್ ಅವರು  ಪ್ರಯಾಣಿಕರೊಬ್ಬರನ್ನು ಕೂರಿಸಿಕೊಂಡು ಗುಜ್ಜನಹಳ್ಳಿ ಗ್ರಾಮದಿಂದ ಅರೇಹಳ್ಳಿಗೆ ಬರುವಂತಹ ಸಂದರ್ಭದಲ್ಲಿ 5 ಕಾಡಾನೆಗಳು ಮಿಷನ್ ಕಾಡಿನ ತಿರುವಿನ ಬಳಿ ಅಡ್ಡಬಂದಿವೆ ಎನ್ನಲಾಗಿದೆ. ಈ ವೇಳೆ 2 ಕಾಡಾನೆಗಳು ಚಲಿಸುತ್ತಿದ್ದ ಆಟೋ ಮೇಲೆ ದಾಳಿ ಮಾಡಲು ಮುಂದಾದಾಗ ಚಾಲಕ ಆಟೋ ಬಿಟ್ಟು ದೂರ ಹೋಗಿದ್ದಾರೆ. ಪ್ರಯಾಣಿಕ ಮಹಿಳೆ ಮಾತ್ರ ಆಟದಲ್ಲಿ ಕುಳಿತು ಅರಚಾಡಲು ಪ್ರಾರಂಭಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕಾಡಾನೆಗಳು ಆಟೋವನ್ನು ರಸ್ತೆಯಿಂದ ತಳ್ಳಿಕೊಂಡು ಚರಂಡಿ ಬಳಿ ಬಿಟ್ಟ ಪರಿಣಾಮ ಆಟೋ ಮುಂಭಾಗ ಜಖಂ ಆಗಿದೆ ಎಂದು ತಿಳಿದು ಬಂದಿದೆ.

 ಆಟೋದಲ್ಲಿ ಕಿರುಚಾಡುತ್ತಿದ್ದ ಒಂಟಿ ಮಹಿಳೆಯನ್ನು ಪಾರುಮಾಡಲು ತಾವೂ ಕೂಡ ಜೋರಾಗಿ ಕಿರುಚಿದ್ದರಿಂದ ಆನೆಗಳು ಅಲ್ಲಿಂದ ತೆರಳಿವೆ. ಘಟನೆಯಲ್ಲಿ ಶಿವಾನಿಯವರಗೆ ಗಾಯಗಳಾಗಿದ್ದು, ಇಂತಹ ಪ್ರಕರಣಗಳು ನಿರಂತರವಾಗಿ ಸಂಭವಿಸುತ್ತಿರುವುದರಿಂದ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿ ಬಡ ಆಟೋ ಚಾಲಕ ಮೋಹನ್ ಅವರಿಗೆ ಇಲಾಖೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News