ಹಾಸನ: ಖಾಸಗಿ ವಿದ್ಯಾಸಂಸ್ಥೆಗೆ ಬಾಂಬ್ ಬೆದರಿಕೆ ಇ-ಮೇಲ್
ಹಾಸನ, ಜೂ.16: ನಗರದ ವಿದ್ಯಾಸೌಧ ಶಿಕ್ಷಣ ಸಂಸ್ಥೆಗಳಿಗೆ ಬಾಂಬ್ ಹಾಕಿ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಬಂದಿರುವುದು ವರದಿಯಾಗಿದೆ.
ವಿಜಯನಗರ, ಇಂಡಸ್ಟ್ರಿಯಲ್ ಏರಿಯಾ ಹಾಗೂ ಕೆ.ಆರ್.ಪುರಂನಲ್ಲಿರುವ ವಿದ್ಯಾಸೌಧ ಪಬ್ಲಿಕ್ ಸ್ಕೂಲ್, ವಿದ್ಯಾಸೌಧ ಕಿಡ್ಸ್ ಮತ್ತು ವಿದ್ಯಾಸೌಧ ಕಾಲೇಜಿಗೆ ಈ ರೀತಿ ಬೆದರಿಕೆ ಇಮೇಲ್ ಗಳು ಬಂದಿವೆ.
ಮಂಜೇಗೌಡ ಎಂಬುವವರ ಮಾಲಕತ್ವದ ಈ ಶಿಕ್ಷಣ ಸಂಸ್ಥೆಗಳಿಗೆ ಬಂದಿರುವ ಇ ಮೇಲ್ ನಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆಗೆ ಶಾಲಾ ಕಟ್ಟಡವನ್ನು ಸ್ಫೋಟಿಸುವುದಾಗಿ ಬೆದರಿಸಲಾಗಿದೆ. ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಹಾಸನ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ರವಿವಾರ ತಡರಾತ್ರಿ ಶಾಲಾ ಕಟ್ಟಡಗಳಿಗೆ ತೆರಳಿ ತೀವ್ರ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
. ಅಪರಿಚಿತನಿಂದ ಬಂದ ಈ ಬೆದರಿಕೆ ಇಮೇಲ್ ಮೂಲವನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ಘಟನೆಯಿಂದ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ಸಿಬ್ಬಂದಿಯಲ್ಲಿ ಆತಂಕ ಮೂಡಿದೆ.