×
Ad

ಹಾಸನ| ಬುದ್ಧಿಮಾಂದ್ಯ ಯುವತಿಯ ಸಾಮೂಹಿಕ ಅತ್ಯಾಚಾರ: ಮೂವರ ವಿರುದ್ಧ ಪ್ರಕರಣ ದಾಖಲು

ಇಬ್ಬರು ಆರೋಪಿಗಳ ಬಂಧನ; ಓರ್ವ ನಾಪತ್ತೆ

Update: 2025-08-09 10:58 IST

ಅತ್ಯಾಚಾರ ಪ್ರಕರಣದ ಆರೋಪಿಗಳು

ಹಾಸನ: ಬುದ್ಧಿಮಾಂದ್ಯ ಯುವತಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ನಗರದ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿಗಳನ್ನು ಅಬ್ದುಲ್ ಅಫ್ತಾಬ್, ರಾಝಿಕ್ ಪಾಷಾ ಮತ್ತು ಉಮ್ರಾನ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವನ ಬಂಧನಕ್ಕೆ ಕ್ರಮವಹಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬುದ್ಧಿಮಾಂದ್ಯ ಯುವತಿಯನ್ನು ಅತ್ಯಾಚಾರಗೈದ ಆರೋಪಿಗಳು ವೀಡಿಯೊವನ್ನು ಸಂತ್ರಸ್ತೆಯ ಸಹೋದರನ ಮೊಬೈಲ್‌ಗೆ ಕಳುಹಿಸಿದ ಬಳಿಕ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಈ ಕುರಿತು ಸಂತ್ರಸ್ತೆಯ ಕುಟುಂಬದವರು ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಿಶೀಲನೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ವಿವರ: ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಮೇರೆಗೆ ಕಳೆದ ಎಂಟು ದಿನಗಳ ಹಿಂದೆ ಸಂತ್ರಸ್ತೆಯ ತಂದೆ ಕೆಲಸಕ್ಕೆ ತೆರಳಿದ ವೇಳೆ ಮನೆಯಲ್ಲಿ ಒಬ್ಬರೇ ಇದ್ದ ಯುವತಿಯನ್ನು ಆರೋಪಿಗಳು ಕರೆದೊಯ್ದು ಅತ್ಯಾಚಾರ ಎಸಗಿ ಅದರ ವೀಡಿಯೊವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದರು ಎನ್ನಲಾಗಿದೆ. ಶುಕ್ರವಾರ ರಾತ್ರಿ ಸಂತ್ರಸ್ತೆಯ ಸಹೋದರನ ಮೊಬೈಲ್‌ಗೆ ಬಂದ ವೀಡಿಯೊ ನೋಡಿ ಘಟನೆ ಬಹಿರಂಗವಾಗಿದೆ. ಈ ವೀಡಿಯೊವನ್ನು ಆರೋಪಿ ಉಮ್ರಾನ್ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ಹಿನ್ನೆಲೆಯಲ್ಲಿ ಹಾಸನದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ನಗರದಲ್ಲಿ ಗಾಂಜಾ ಮಾರಾಟ ಹೆಚ್ಚುತ್ತಿರುವುದೇ ಇಂತಹ ಅಪರಾಧಗಳಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಗರದ 80 ಅಡಿ ರಸ್ತೆ, ಇಲಾಹಿನಗರ, ಚಿಕ್ಕನಾಳು ಮತ್ತು ಪೆನ್‌ಷನ್ ಮೊಹಲ್ಲಾ ಪ್ರದೇಶಗಳಲ್ಲಿ ಗಾಂಜಾ ಹಾವಳಿಯಿಂದ ಇಂತಹ ಘಟನೆಗಳು ನಡೆಯಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು, ಗಾಂಜಾ ಜಾಲವನ್ನು ಬೇರುಸಹಿತ ನಿರ್ಮೂಲ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News